ಬೆಂಗಳೂರು: ನಾವು ಬಸವರಾಜ ಬೊಮ್ಮಾಯಿ ಅವರ ಬಜೆಟ್ ಅನ್ನು ಸ್ವಲ್ಪ ಮಾರ್ಪಾಡಿಸಿ ಮಂಡಿಸಿದ್ದೇವೆ.
ಹೀಗಾಗಿ ಈ ವರ್ಷ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಪ್ರತ್ಯೇಕವಾಗಿ ಹೆಚ್ಚಿನ ಅನುದಾನ ನೀಡಲು ಮತ್ತು ಈ ನೀರಾವರಿ ಯೋಜನೆಗಳಿಗೆ ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರದ ಹಣ ನೀಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಮಂಗಳವಾರ ನಿಯಮ 72ರ ಅಡಿ ಬಿಜೆಪಿ ಸದಸ್ಯ ಹನುಮಂತ ನಿರಾಣಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಡಿಕೆಶಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಪ್ರತ್ಯೇಕವಾಗಿ ಹೆಚ್ಚಿನ ಅನುದಾನ ನೀಡಬೇಕು. ನೀರಾವರಿ ಯೋಜನೆಗಳಿಗೆ ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರ ನೀಡುವ ಹಾಗೂ ಪುನರ್ವಸತಿ ಕೇಂದ್ರಗಳ ಕಾಮಗಾರಿ ಮತ್ತೆ ಚಾಲನೆ ನೀಡಲು ಹನುಮಂತ ನಿರಾಣಿ ಪ್ರಸ್ತಾಪಿಸಿದ್ದಾರೆ. ಸದಸ್ಯರು ಹೇಳಿದ ಮಾತಿನಲ್ಲಿ ಸತ್ಯವಿದೆ. ಸಂತ್ರಸ್ತರಿಗೆ ಎಷ್ಟು ಹಣ ನೀಡಬೇಕು ಎಂಬುದರ ಬಗ್ಗೆ ಬಹಳ ದಿನಗಳಿಂದ ತೀರ್ಮಾನ ಆಗಬೇಕಿತ್ತು.
ಬಾಗಲಕೋಟೆ ಭಾಗದಲ್ಲಿ 2-3 ಲಕ್ಷ ಇದ್ದರೂ 10-15 ಲಕ್ಷಕ್ಕೆ ಮಾಡಲಾಗಿತ್ತು. ಹೀಗಾಗಿ ಸಮಸ್ಯೆ ಆಗಿತ್ತು. ನಾವು ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಅನ್ನು ಸ್ವಲ್ಪ ಮಾರ್ಪಾಡು ಮಾಡಿ ಮಂಡಿಸಿದ್ದೇವೆ. ಹೀಗಾಗಿ ಈ ವರ್ಷ ಇದಕ್ಕೆ ಹಣ ನೀಡಲು ಆಗುತ್ತಿಲ್ಲ. ಆದರೂ ಇದು ಆದ್ಯತೆ ಯೋಜನೆ ಆಗಿದ್ದು, ನಾನು ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಬಾಕಿ ಇರುವ ಅಧಿಸೂಚನೆ ಸರಿಪಡಿಸುವಂತೆ ಮನವಿ ಮಾಡಿದ್ದೇನೆ. ಸದನ ಮುಗಿಯುವ ಒಳಗೆ ಈ ವಿಚಾರವಾಗಿ ಮಾತನಾಡಲು ಸಭೆ ಮಾಡುತ್ತೇನೆ. ನಿಮ್ಮನ್ನು ಸೇರಿದಂತೆ ಈ ಭಾಗದ ನಾಯಕರನ್ನು ಆಹ್ವಾನಿಸಿ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಆ ಸಭೆಯಲ್ಲಿ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಿ ಎಂದು ತಿಳಿಸಿದರು.