ಬೆಂಗಳೂರು: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯದ ಜನರನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು 3 ಲಕ್ಷ 28 ಸಾವಿರ ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಲಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿ, ರಾಜ್ಯದ ಎಲ್ಲ ವರ್ಗದ ಜನರ ಸಬಲೀಕರಣಕ್ಕಾಗಿ ಈ ಬಜೆಟ್ ಪೂರಕ, ಆಶಾದಾಯಕವಾಗಿದ್ದು, ಜನಪರ, ಜನಸ್ನೇಹಿ ಬಜೆಟ್ ಆಗಿದೆ ಎಂದುಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 14ನೇ ಬಜೆಟ್‌ನಲ್ಲಿ ರಾಜ್ಯದ ರೈತರು, ಮಹಿಳೆಯರು, ಯುವಕರ ಸಬಲೀಕರಣಕ್ಕೆ ಈ ಬಜೆಟ್‍ನಲ್ಲಿ ವಿಶೇಷವಾಗಿ ಹೊಸ ಯೋಜನೆಗಳನ್ನು ಜಾರಿ ಮಾಡಲು ನಿರ್ಧರಿಸಲಾಗಿದೆ. ಒಟ್ಟಾರೆಯಾಗಿ ಕೃಷಿ, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ನೀರಾವರಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಗೆ 10.143 ಕೋಟಿ ರೂ.: ಸಿಎಂ ಸಿದ್ದರಾಮಯ್ಯ ಮಂಡಿಸಿದ 14ನೇ ಬಜೆಟ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ 10.143 ಕೋಟಿ ರೂ. ನೀಡಿರುವುದು ಸ್ವಾಗತಾರ್ಹವಾಗಿದೆ. ಅಲ್ಲದೇ ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ದೇಶದಲ್ಲೇ ಮೊದಲ ಅಂಗಾಗ ಜೋಡಣೆ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಸಹ ಕೈಬಿಡಲಾಗಿದೆ. ರೈತರಿಗೆ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ರೂ. 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಹಾಗೂ ದೀರ್ಘಾವಧಿ ಸಾಲ ರೂ. 10 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ನರೇಗಾ ಯೋಜನೆಗೆ ರೂ.10 ಕೋಟಿ ಅನುದಾನ, ಇಂದಿರಾ ಕ್ಯಾಂಟೀನ್ ಗೆ ರೂ. 100 ಕೋಟಿ ಅನುದಾನ ಮೀಸಲಿಡಲಾಗುತ್ತಿದೆ. ಒಟ್ಟಾರೆ ಎಲ್ಲ ವಲಯಗಳ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿರುವುದು ಸ್ವಾಗತಾರ್ಹವಾದದ್ದು ಎಂದು ಅವರು ಬಣ್ಣಿಸಿದ್ದಾರೆ.