ಬೆಂಗಳೂರು : ಗೋಹತ್ಯೆ ನಿಷೇಧ ಕಾಯ್ದೆ ಸಾಧಕ- ಬಾಧಕಗಳ ಕುರಿತು ನಾವು ನಮ್ಮಲ್ಲಿ ಚರ್ಚೆ ನಡೆಸಿದ್ದೇವೆ. ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವ ಕೆ.
ಆರ್ ವೆಂಕಟೇಶ್ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ರವಿಕುಮಾರ್ ಚರ್ಚೆಗೆ ಉತ್ತರಿಸಿದ ಸಚಿವರು, ನಾವು ಕಾಯ್ದೆ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದೊಮ್ಮೆ ಸದಸ್ಯರ ಬಳಿ ಈ ವಿಚಾರಕ್ಕೆ ಸಂಬಂಧಿಸಿ ಮಾಹಿತಿ ಇದ್ದರೆ ಅವರು ಮಾಹಿತಿ ನೀಡಲಿ. ಕ್ರಮ ಕೈಗೊಳ್ಳುತ್ತೇವೆ ಎಂದರು.
ಮತ್ತಷ್ಟು ಚರ್ಚೆಗೆ ಮುಂದಾದ ರವಿಕುಮಾರ್ಗೆ ತಡೆ ಒಡ್ಡಿದ ಸಭಾಪತಿ ಬಸವರಾಜ ಹೊರಟ್ಟಿ, ಇದೇ ವಿಚಾರದ ಚರ್ಚೆ ಪ್ರಶ್ನೋತ್ತರ ಅವಧಿಯಲ್ಲಿ ಬೇಡ. ಅರ್ಧ ಗಂಟೆ ಚರ್ಚೆಗೆ ಅವಕಾಶ ಕೋರಿ ಪತ್ರ ಸಲ್ಲಿಸಿ. ಅವಕಾಶ ನೀಡೋಣ ಎಂದರು. ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್, ಗೋಹತ್ಯೆ ನಿಷೇಧ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆದರೆ, ಇದರ ನಿಷೇಧ ಕುರಿತು ಸಾಧಕ-ಬಾಧಕಗಳ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.
ಇದಕ್ಕೆ ಪುಷ್ಠಿ ನೀಡುವ ರೀತಿ ಸಚಿವರು ಮೈಸೂರಲ್ಲಿ ಮಾತನಾಡಿ ಎಮ್ಮೆ, ಕೋಣ ಕಡಿಯುವುದಾದರೆ ಗೋವನ್ನು ಯಾಕೆ ಹತ್ಯೆ ಮಾಡಬಾರದು ಎಂದಿದ್ದಾರೆ. ಇದರಿಂದ ಸಚಿವರಿಂದ ಸ್ಪಷ್ಟೀಕರಣ ಬೇಕು. ಅವರ ನಿಲುವು ಏನೆಂದು ಹೇಳಲಿ. ಬಕ್ರೀದ್ ಸಂದರ್ಭ ಹಲವೆಡೆ ಗೋಹತ್ಯೆ ಆಗಿದೆ. ಶಿರಸಿ ಬಳಿ ಹಳ್ಳಿಯೊಂದರ ರಸ್ತೆಯಲ್ಲಿ ಗೋವಿನ ತಲೆ ಸಿಕ್ಕಿದೆ. ಇದಕ್ಕೆ ಕ್ರಮ ಆಗಲಿ ಎಂದು ಹೇಳಿದರು. ಅಂತಿಮವಾಗಿ ಬಿಜೆಪಿ ಸದಸ್ಯರು ತಮ್ಮ ಹೋರಾಟ ಕೈಬಿಟ್ಟು ಸ್ಥಾನಕ್ಕೆ ವಾಪಸ್ ಆದರು.