ಬಾಗಲಕೋಟೆ: ನನ್ನ ಆಡಿಯೋ ಬಂದಿವೆಯೇ ಹೊರತು ವಿಡಿಯೋ ಏನ್ ಬಂದಿಲ್ಲ ಅಲ್ವಾ?.
ಆದ್ರೆ ನನ್ನ ಹತ್ತಿರ ಅವರ ವಿಡಿಯೋಗಳಿವೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೊಸ ಬಾಂಬ್ ಹಾಕಿದ್ದಾರೆ. ಇಲ್ಲಿನ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಬಳಿ ಇರುವ ವಿಡಿಯೋ ರಿಲೀಸ್ ಮಾಡಿದ್ರೆ, ಅವರು ನೇಣು ಹಾಕಿಕೊಳ್ಳಬೇಕಾಗುತ್ತದೆ ಎಂದು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು.
ತಮ್ಮ ಆಡಿಯೋ ಸಂಭಾಷಣೆ ವೈರಲ್ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕರು, ಮೂರ್ನಾಲ್ಕು ವರ್ಷದ ಹಿಂದಿನ ನನ್ನ ಹಳೆಯ ಆಡಿಯೋ ಬಿಡುಗಡೆ ಮಾಡ್ತಿದಾರೆ. ನನ್ನದು ಬರೀ ಆಡಿಯೋ ಇವೆ, ವಿಡಿಯೋ ಇಲ್ಲ. ಮುಂದೆಯೂ ಕೂಡ ಆಡಿಯೋ ಮಾತ್ರ ಇರುತ್ತವೆ ಹೊರತು ವಿಡಿಯೋ ಇರಲ್ಲ. ಆದ್ರೆ ನನ್ನ ಬಳಿ ಅವರ ವಿಡಿಯೋಗಳಿವೆ ಎಂದು ಎಚ್ಚರಿಕೆ ಕೊಟ್ಟರು.
ಇದೇ ಸಮಯದಲ್ಲಿ, ಕಳೆದ ಜೂನ್ 26ರಂದು ನಡೆದ ಬಿಜೆಪಿ ಗಲಾಟೆ ವಿಚಾರವಾಗಿ ಮಾತನಾಡಿ, ಅಂದಿನ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ತಿಳಿಸುವ ಸಮಾವೇಶ ಆಗಿತ್ತು. ಮಾಜಿ ಸಿಎಂ ಬೊಮ್ಮಾಯಿ ಸೇರಿದಂತೆ ಹಲವರು ನಾಯಕರು ಬಂದಿದ್ದರು. ಕಾರ್ಯಕ್ರಮಕ್ಕೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಕೆಲವರನ್ನು ಹೊರಹಾಕಲು ಹೇಳಿದೆ. ಕೆಲವರು ತಾವು ಮಾಡಿದ ತಪ್ಪನ್ನು ಮುಚ್ಚಿ, ಅದನ್ನು ಸಮಾಜದ ಮೇಲೆ ಹಾಕುತ್ತಿದ್ದಾರೆ. ನಾನು ಯಾವ ಸಮಾಜಕ್ಕೂ ಏನೂ ಹೇಳಿಲ್ಲ. ಎಲ್ಲ ಸಮಾಜದವರು ನನಗೆ ಮತ ಹಾಕಿದ್ದಾರೆ. ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ.ಶೇಖರ್ ಮಾನೆಗೂ ನನಗೂ ವೈಯಕ್ತಿಕ ಏನೂ ಇಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಕಾರ್ಯಕ್ರಮಕ್ಕೆ ತೊಂದರೆ ಅಗಬಾರದೆಂದು ಕಾರ್ಯಕ್ರಮದಿಂದ ಹೊರ ಹಾಕಿದ್ದೇವೆ ಸ್ಪಷ್ಟನೆ ನೀಡಿದರು.
Laxmi News 24×7