ರಾಮನಗರ: ನಮ್ಮನ್ನು ಜನ ಆಯ್ಕೆ ಮಾಡಿದ್ದಾರೆ. ಜನ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಸರ್ಕಾರದ ಸೇವೆ ಮಾಡಲು ನೀವಿದ್ದಿರಿ. ರಾಜಕಾರಣಿಗಳು ಅಧಿಕಾರಿಗಳ ಬಳಿ ಜನ ಬರೋದು ಸಮಸ್ಯೆ ಬಗೆಹರಿಯದೇ ಇದ್ದಾಗ. ಆ ಸಮಸ್ಯೆ ಬಗೆಹರಿಸಬೇಕಾದ್ದು ನಮ್ಮ ಕರ್ತವ್ಯ.
ಕಾನೂನು ಚೌಕಟ್ಟಿನೊಳಗೆ ಸಮಸ್ಯೆಗಳನ್ನು ಪರಿಹರಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ರಾಮನಗರ ಜಿಲ್ಲಾ ಪಂಚಾಯಿತಿಯಲ್ಲಿ ಇಂದು ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರವನ್ನು ಜನತೆ ಸುಮ್ಮನೆ ಆಯ್ಕೆ ಮಾಡಿಲ್ಲ. ಉತ್ತಮ ಆಡಳಿತ ಕೊಡ್ತೀವಿ ಅಂತ ಆಯ್ಕೆ ಮಾಡಿದ್ದಾರೆ. ಬಿಜೆಪಿ ಆಡಳಿತ ವೈಖರಿಯನ್ನು ನೋಡಿದ್ದಾರೆ. ಅದು ಜನರಿಗೆ ಹತ್ತಿರವಾಗುವ ಆಡಳಿತವಲ್ಲ, ಕರಪ್ಷನ್ ಕ್ಯಾಪಿಟಲ್ ಎಂಬ ಕಾರಣಕ್ಕೆ ಬಿಜೆಪಿ ಬದಲಾಯಿಸಿ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ ಎಂದರು.
ಎಷ್ಟು ಮಂದಿ ಹೆಡ್ ಕ್ವಾರ್ಟರ್ಸ್‌ನಲ್ಲಿ ಮನೆ ಮಾಡಿದ್ದೀರಿ, ಕೈ ಎತ್ತಿ. ನಿಮಗೆ ಒಂದು ತಿಂಗಳು ಅವಕಾಶ ಕೊಡ್ತೀನಿ. ಹೆಡ್ ಕ್ವಾರ್ಟರ್ಸ್‌ನಲ್ಲೇ ಇದ್ದು ಕೆಲಸ ಮಾಡಬೇಕು. ಹೆಡ್ ಕ್ವಾರ್ಟರ್ಸ್ ಬಿಟ್ಟು ಹೋದರೆ ಡಿಸಿ ಅವರು ನಮಗೆ ಮಾಹಿತಿ ಕೊಡಬೇಕು. ಗ್ರಾ.ಪಂ ನಿಂದ ಜಿಲ್ಲಾಮಟ್ಟದ ಅಧಿಕಾರಿವರೆಗೆ ಎಲ್ಲರೂ ಕೇಂದ್ರಸ್ಥಾನದಲ್ಲೇ ಉಳಿದುಕೊಂಡು ಕೆಲಸ ಮಾಡಬೇಕು ಎಂದು ಡಿಸಿಎಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನೀವು ಯಾರಿಗೂ ಲಂಚ ಕೊಡಬೇಡಿ. ನೀವೂ ಲಂಚ ತಗೋಬೇಡಿ. ನಾನು ಯಾರನ್ನೂ ವರ್ಗಾವಣೆ ಮಾಡಿಸೋಲ್ಲ. ನಿಮ್ಮತ್ರ ಯಾವ ರೀತಿ ಕೆಲಸ ಮಾಡಿಸಬೇಕು ಎಂದು ಗೊತ್ತಿದೆ. ಎಲ್ಲ ಅಧಿಕಾರಿಗಳ ಫೋನ್ ನಂಬರ್, ವಿಳಾಸದ ಡೈರಿ ಮಾಡಿ, ಅವರ ಫೋಟೋ ಸಮೇತ ಪುಸ್ತಕ ಮಾಡಿ. ಒಂದು ಡಿಸ್ಟ್ರಿಕ್ಟ್ ಗ್ರೂಪ್ ಮಾಡಿ. ಕಚೇರಿಗೆ ಬಂದು ಹೋಗುವವರ ಬಗ್ಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿರಲಿ. ನಾನೇ ಬಯೋಮೆಟ್ರಿಕ್ ಮಷಿನ್ ಕೊಡಿಸ್ತೀನಿ ಎಂದು ಹೇಳಿದರು.
ಸರ್ಕಾರಿ ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪಿಸಬೇಕು. ಭ್ರಷ್ಟಾಚಾರದ ವಿರುದ್ಧ ಮಾಹಿತಿ ನೀಡಲು ಬೋರ್ಡ್ ಹಾಕಿಸಿ. ಕೆಲವರು ಆರ್ಟಿಐ ಕಾರ್ಯಕರ್ತರ ಹೆಸರಲ್ಲಿ ವಂಚಕರು ಸೇರಿದ್ದಾರೆ. ಅವರಿಗೆ ಹೆದರುವ ಅವಶ್ಯಕತೆ ಇಲ್ಲ. ಯಾವುದೇ ಪ್ರೈವೇಟ್ ಕ್ಲಬ್ ಇರಬಾರದು. ಗಾಂಜಾ, ರೇವ್ ಪಾರ್ಟಿ ಯಾವುದಕ್ಕೂ ಜಿಲ್ಲೆಯಲ್ಲಿ ಅವಕಾಶವಿಲ್ಲ. ಕಾನೂನು ಸುವ್ಯವಸ್ಥೆ ಕಡೆ ಪೊಲೀಸರು ಗಮನಹರಿಸಬೇಕು ಎಂದು ಸೂಚಿಸಿದರು.
ತ್ಯಾಜ್ಯದ ಕಡೆ ಹೆಚ್ಚು ಗಮನ ಹರಿಸಿ: ಬೆಂಗಳೂರಿಂದ ತ್ಯಾಜ್ಯ ತಂದು ರಸ್ತೆಗಳ ಪಕ್ಕ ಸುರಿಯುತ್ತಿದ್ದಾರೆ. ಅಲ್ಲಿಗೆ ಕ್ಯಾಮರಾ ಹಾಕಿ. ಬೇಕಾಬಿಟ್ಟಿ ತ್ಯಾಜ್ಯ ನಿರ್ವಹಣೆಗೆ ಕಡಿವಾಣ ಹಾಕಬೇಕಿದೆ. ಮುಖ್ಯವಾಗಿ ಬೆಂಗಳೂರಿನಿಂದ ಪ್ರವೇಶ ಪಡೆಯುವ ರಾಮನಗರ, ಕನಕಪುರ, ಮಾಗಡಿ ರಸ್ತೆಗಳಿಗೆ ಕ್ಯಾಮೆ ರಾ ಹಾಕಿ. ಇದರಿಂದ ಅಪರಾಧ ಚಟುವಟಿಕೆ ತಡೆಗೂ ಸಹಕಾರಿಯಾಗುತ್ತದೆ ಎಂದರು.
ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಭ್ರಷ್ಟಾಚಾರರಹಿತ ಅನುಷ್ಠಾನಕ್ಕೆ ಆದ್ಯತೆ ಕೊಡಬೇಕು. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಜೀರೋ ಟಿಕೆಟ್ ಲೆಕ್ಕ ಇಡಿ. ಗೃಹ ಜ್ಯೋತಿ ರಿಜಿಸ್ಟ್ರೇಷನ್ಗೆ ಕರಪ್ಷನ್ ಆಗದಂತೆ ನೋಡಿಕೊಳ್ಳಿರಿ. ಗೃಹಲಕ್ಷ್ಮಿ ಆಪ್ ಸಿದ್ಧ ಮಾಡಿದ್ದೇವೆ. ಯೋಜನೆ ಜಾರಿ ದಿನಾಂಕ ನಾಳೆ ನಿರ್ಧಾರ ಆಗಲಿದೆ. ಪ್ರಜಾಪ್ರತಿನಿಧಿ ವಾಲೆಂಟರೀಸ್ ಜನರಿಗೆ ಸಹಾಯ ಮಾಡಬೇಕು. ಎಲ್ಲವೂ ಉಚಿತ. ಗ್ರಾಮ ಒನ್‌ನಲ್ಲಿ ಯಾರಾದರೂ ಲಂಚ ಕೇಳಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.