ರಾಯಚೂರು : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹೊಲಕ್ಕೆ ನುಗ್ಗಿರುವ ಘಟನೆ ಜಿಲ್ಲೆಯ ಮಾನವಿ ಪಟ್ಟಣ ಹೊರವಲಯದ ಸಿಂಧನೂರು ರಸ್ತೆಯ ನಂದಿಹಾಳ ಗ್ರಾಮದಲ್ಲಿ ಇಂದು ನಡೆದಿದೆ.
ಅಪಘಾತದಲ್ಲಿ ಸುಮಾರು 25ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ಕುರುಬರಹಳ್ಳಿಯ ಚಾಲಕರ ಸಂಘದವರು ಖಾಸಗಿ ಬಸ್‌ನಲ್ಲಿ ಆಗಮಿಸಿದ್ದರು. ಇಂದು ಗುರುರಾಯರ ದರ್ಶನ ಪಡೆದು ಬೆಂಗಳೂರಿಗೆ ಮರಳುತ್ತಿದ್ದರು. ನಂದಿಹಾಳ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಎದುರಿಗೆ ಬರುತ್ತಿದ್ದಾಗ ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಜಮೀನಿಗೆ ನುಗ್ಗಿದೆ. ಇದರಿಂದಾಗಿ ಬಸ್ನಲ್ಲಿದ್ದ 25ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕನಿಗೆ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಪಿಐ ವೀರಭದ್ರಯ್ಯ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಮಾನವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.