ದಾವಣಗೆರೆ: ಲಂಚ ಸ್ವೀಕರಿಸುವ ವೇಳೆ ಹರಿಹರ ನಗರಸಭೆ ಕಾಂಗ್ರೆಸ್ ಸದಸ್ಯೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರನಿಂದ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ನಗರಸಭೆ ಸದಸ್ಯೆ ನಾಗರತ್ನ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಹರ ನಗರಸಭೆ ಕಾಂಗ್ರೆಸ್ ಸದಸ್ಯೆ ನಾಗರತ್ನ ಜತೆಗೆ ಅವರ ಪತಿ ಮಂಜುನಾಥ, ಪುತ್ರ ರೇವಂತ ಸೇರಿ ಗುತ್ತಿಗೆದಾರ ಮಜೀದ್ ಎಂಬುವರಿಂದ ಲಂಚ ಸ್ವೀಕರಿಸುವ ವೇಳೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ವಿವರ: ನಾಗರತ್ನ ಅವರು ತಮ್ಮ ಮನೆಯಲ್ಲಿಯೇ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಾಗರತ್ನ ಮತ್ತು ಅವರ ಪತಿ ಮಂಜುನಾಥ್ ಇಬ್ಬರು ಕೂಡ ಗುತ್ತಿಗೆದಾರ ಮಜೀದ್ ಅವರ ಬಳಿ ಹಣ ಕೊಡುವಂತೆ ಪೀಡಿಸುತ್ತಿದ್ದರು. ಇವರ ಕಿರುಕುಳದಿಂದ ಬೇಸತ್ತ ಗುತ್ತಿಗೆದಾರ ಮಜೀದ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ತಕ್ಷಣ ಕಾರ್ಯ ಪ್ರವೃತ್ತರಾದ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ಅವರು ತಮ್ಮ ಸಿಬ್ಬಂದಿಯೊಂದಿಗೆ ನಗರಸಭೆ ಸದಸ್ಯೆಯನ್ನು ಟ್ರ್ಯಾಪ್ ಮಾಡಿ ಖೆಡ್ಡಾಕ್ಕೆ ಕೆಡವಿದ್ದಾರೆ. 20 ಸಾವಿರ ಹಣ ಪಡೆಯುವಾಗ ಲೋಕಾ ಬಲೆಗೆ ಸಿಕ್ಕಿ ಬಿದ್ದಿದ್ಧಾರೆ. ಪ್ರಕರಣ ಸಂಬಂಧ ನಗರಸಭೆ ಸದಸ್ಯೆ ನಾಗರತ್ನ, ಪತಿ ಮಂಜುನಾಥ ಹಾಗೂ ಪುತ್ರ ರೇವಂತ ಮೂರು ಜನರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಎಸ್‍ಐ, ಕಾನ್ಸ್‌ಟೇಬಲ್: ಇತ್ತೀಚೆಗೆ ಲಂಚ ಸ್ವೀಕರಿಸುತ್ತಿದ್ದ ಬಸವಕಲ್ಯಾಣ ತಾಲೂಕಿನ ಮಂಠಾಳದ ಪಿಎಸ್‍ಐ ಹಾಗೂ ಕಾನ್ಸ್‌ಟೇಬಲ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಪಿಎಸ್‍ಐ ಶೀಲಾ ನ್ಯಾಮನ್ ಮತ್ತು ಕಾನ್ಸ್‌ಟೇಬಲ್ ಪರಶುರಾಮ ರೆಡ್ಡಿ ಬಂಧಿತರು. ಇವರು ಮರಳು ಸಾಗಾಣಿಕೆ ಮಾಡಲು ಪ್ರತಿ ತಿಂಗಳು ಒಂದು ಲಾರಿಗೆ 7 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಒಟ್ಟು ಮೂರು ಲಾರಿಗಳಿಗೆ 21 ಸಾವಿರ ರೂ. ಬೇಡಿಕೆ ಇಟ್ಟಿದ್ದು , ಕಲಬುರಗಿ ನಗರದ ಇರ್ಷಾದ್ ಪಟೇಲ್ ಎನ್ನುವವರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಲೋಕಾಯುಕ್ತ ಎಸ್ಪಿ ಎ.ಆರ್.ಕರ್ನೂಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್.ಎಂ ಓಲೇಕಾರ್, ತನಿಖಾಧಿಕಾರಿಗಳಾದ ಬಾಬಾ ಸಾಹೇಬ್ ಪಾಟೀಲ್, ಪ್ರದೀಪ ಕೊಳ್ಳಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.