ಬೆಂಗಳೂರು: ಅತಿಥಿ ದೇವೋಭವ ಎಂಬ ಪರಿಕಲ್ಪನೆಯನ್ನ ಅತ್ಯಂತ ಗೌರವದಿಂದ ಆಚರಿಸುವ ದೇಶ ಭಾರತ.
ಭಾರತದ ಯೂಟ್ಯೂಬರ್ಗಳು ಗಡಿ ದಾಟಿ ವಿಶ್ವದ ಮೂಲೆ ಮೂಲೆ ಪರಿಚಯಿಸುತ್ತಿರುವ ಈ ದಿನಗಳಲ್ಲಿ ಭಾರತೀಯರನ್ನ ಅಲ್ಲಿನ ಜನ ಬರಮಾಡಿಕೊಳ್ಳುವ ರೀತಿಯೂ ಸಹ ಅತಿಥಿ ದೇವೋಭವದ ಪರಿಕಲ್ಪನೆಯನ್ನ ಮತ್ತೊಮ್ಮೆ ನೆನಪಿಸುತ್ತಿದೆ. ಆದರೆ, ಅತಿಥಿ ಸತ್ಕಾರದಲ್ಲಿ ಸದಾ ಮುಂದು ಎನಿಸುವ ನಮ್ಮದೇ ರಾಜ್ಯದ, ರಾಜಧಾನಿ ಬೆಂಗಳೂರಿನಲ್ಲಿ ಇದಕ್ಕೆ ತದ್ವಿರುದ್ಧ ಎನಿಸುವ ಘಟನೆಯೊಂದು ನಡೆದಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರನ್ನ ಸುತ್ತಾಡಲು ಬಂದಿದ್ದ ನೆದರ್ಲೆಂಡ್ ಮೂಲದ ಖ್ಯಾತ ಯೂಟ್ಯೂಬರ್ ಪೆಡ್ರೋ ಮೋಟಾಗೆ ಸ್ಥಳೀಯನೊಬ್ಬ ಕಿರುಕುಳ ನೀಡಿದ್ದಾರೆ ಎನ್ನಲಾದ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ. ನೆದರ್ಲೆಂಡ್ ಮೂಲದ ಪೆಡ್ರೋ ಕಳೆದ ಎರಡು ತಿಂಗಳಿನಿಂದ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಬೆಂಗಳೂರನ್ನ ಪರಿಚಯಿಸುತ್ತಾ ವ್ಲಾಗ್ ಮಾಡುತ್ತಿರುವಾಗ ತಡೆದ ಸ್ಥಳೀಯರೊಬ್ಬರು ಪೆಡ್ರೋರನ್ನ ರಸ್ತೆಯಲ್ಲಿ ಎಳೆದಾಡಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ವ್ಯಕ್ತಿಯಿಂದ ಪೆಡ್ರೋ ತಪ್ಪಿಸಿಕೊಂಡ ದೃಶ್ಯಗಳು ಲೈವ್ ರೆಕಾರ್ಡಿಂಗ್ನಲ್ಲಿ ಸೆರೆಯಾಗಿವೆ.
ಘಟನೆಯ ಕುರಿತು ಮುದಾಸಿರ್ ಅಹಮದ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಘಟನೆ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಘಟನೆಯ ಕುರಿತು ಬೆಂಗಳೂರುನಗರ ಪೊಲೀಸರು ರಿ ಟ್ವೀಟ್ ಮಾಡಿ, ಅಗತ್ಯ ಕ್ರಮಕ್ಕಾಗಿ ನಿಮ್ಮ ಮನವಿಯನ್ನು ಪಶ್ಚಿಮ ವಿಭಾಗದ ಡಿಸಿಪಿಯವರ ಗಮನಕ್ಕೆ ತರಲಾಗಿದೆ ಎಂದು ಬರೆದಿದ್ದಾರೆ.
ಆರೋಪಿ ಬಂಧನ: ಕಾಟನ್ ಪೇಟೆ ಠಾಣಾ ಪೊಲೀಸರು ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ನವಾಬ್ ಹಯಾತ್ ಶರೀಫ್ ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.