ಬೆಳಗಾವಿ : ಕುಡಿದ ಅಮಲಿನಲ್ಲಿ ಶಿಕ್ಷಕನೊಬ್ಬ ಶಾಲೆಯಲ್ಲಿಯೇ ನಿದ್ದೆಗೆ ಜಾರಿ ಕರ್ತವ್ಯಲೋಪ ಎಸಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.
ಕನ್ನಡ ಶಿಕ್ಷಕ ರವಿ ಪಾಟೀಲ ಕುಡಿದು ಶಾಲೆಗೆ ಬಂದು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ನಗರದ ಮಹಾದ್ವಾರ ರಸ್ತೆಯಲ್ಲಿರುವ ಸರ್ಕಾರಿ ಮರಾಠಿ ಮಾಧ್ಯಮ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ ರವಿ ಪಾಟೀಲ ಇಂದು ಮದ್ಯ ಸೇವಿಸಿ ಶಾಲೆಗೆ ಬಂದು ಇಲ್ಲೇ ಮಲಗಿದ್ದಾರೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸಿದ್ದಾರೆ. ನೋಡಿದ ಶಾಲಾ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಸ್ಡಿಎಂಸಿ ಸದಸ್ಯರು ಹಾಗೂ ಪಾಲಕರು ಶಿಕ್ಷಕ ರವಿ ಪಾಟೀಲ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಶಿಕ್ಷಕ ರವಿ ಪಾಟೀಲ ತಾನು ಮದ್ಯ ಸೇವಿಸಿಯೇ ಇಲ್ಲ ಎಂದು ವಾದ ಮಾಡಿದ್ದಾರೆ. ಬಳಿಕ ಪೋಷಕರು ವಿದ್ಯಾರ್ಥಿಗಳ ಬಳಿ ಕೇಳಿದಾಗ ಶಿಕ್ಷಕ ಕುಡಿದು ಶಾಲೆಗೆ ಬಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಮುಂದೆ ನಾನು ಮದ್ಯ ಕುಡಿದು ಶಾಲೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು ಈ ರೀತಿ ಕುಡಿದು ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಶಿಕ್ಷಕ ಕುಡಿದು ಬಂದು ಶಿಕ್ಷೆಗೆ ಗುರಿಯಾಗಿದ್ದರು. ಅದಾದ ಬಳಿಕವೂ ಇವರು ಸುಧಾರಿಸಿರಲಿಲ್ಲ. ಈಗ ಮತ್ತೆ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಇಒ ರವಿ ಭಜಂತ್ರಿ, ಶಿಕ್ಷಕ ಮದ್ಯ ಸೇವಿಸಿ ಶಾಲೆಗೆ ಬಂದಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ದ.ಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಮಾನತು : ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ ಎಂಬವರನ್ನು ಅಮಾನತು ಮಾಡಲಾಗಿತ್ತು. ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಅವರು ಅಮಾನತುಗೊಳಿಸಿ ಆದೇಶಿಸಿದ್ದರು.
ಆದರೆ ತಮ್ಮ ಮೇಲೆ ಮಾಡಲಾದ ಆರೋಪಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಅವರು ನಿರಾಕರಿಸಿದ್ದರು. ಜಯಣ್ಣ ಅವರು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹೊರಡಿಸಿದ ನೋಟಿಸ್ಗೆ ಮೇ 22 ರಂದು ಲಿಖಿತ ಉತ್ತರ ನೀಡಿದ್ದರು. ಈ ಉತ್ತರ ಸಮಾಧಾನಕರವಾಗಿಲ್ಲ ಎಂದು ಅಮಾನತು ಮಾಡಲಾಗಿತ್ತು.
ಸೆಲ್ಫಿ ತೆಗೆದಿದ್ದಕ್ಕೆ ದೈಹಿಕ ಶಿಕ್ಷಕ ಅಮಾನತು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಅಂಜನ್ ಕುಮಾರ್ ಅವರನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಕ್ಕೆ ಅಮಾನತು ಮಾಡಲಾಗಿತ್ತು. ಇವರನ್ನು ಸೋಲೂರು ಹೋಬಳಿಯಲ್ಲಿ ಸ್ಥಾಪಿಸಲಾಗಿದ್ದ ಚೆಕ್ಪೋಸ್ಟ್ನಲ್ಲಿ ಎಸ್.ಎಸ್.ಟಿ ತಂಡದ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ಆದರೆ ಕಾರ್ಯ ನಿರ್ವಹಿಸುವ ವೇಳೆ ಅಂಜನ್ ಕುಮಾರ್ ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಕ್ಕೆ ಜಿಲ್ಲಾಧಿಕಾರಿ ಅಮಾನತು ಮಾಡಿದ್ದರು.