Breaking News

ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಆರಂಭ.. ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಆಗಿದೆ : ಕುಮಾರಸ್ವಾಮಿ ಆರೋಪ

Spread the love

ಬೆಂಗಳೂರು : ರಾಜ್ಯದಲ್ಲಿ ವರ್ಗಾವಣೆ ದಂಧೆ ಶುರುವಾಗಿದ್ದು, ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದಾರೆ. ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಇಂದು ವಿವಿಧ ಜಿಲ್ಲೆಗಳ ಮುಖಂಡರ ಆತ್ಮಾವಲೋಕನ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುತ್ತಿದ್ದ ಇದೇ ಕಾಂಗ್ರೆಸ್ ನಾಯಕರು ಈಗ ಪ್ರತಿ ಹುದ್ದೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳ ಬಗ್ಗೆ ಇವರೇ ಪೇಸಿಎಂ ಎಂದು ಪ್ರಚಾರ ಮಾಡಿದ್ದರು. ಆದರೆ, ಅದಕ್ಕಿಂತ ಜಾಸ್ತಿ ಈ ಸರ್ಕಾರದಲ್ಲಿ ನಡೆಯುತ್ತಿದೆ. ಎಷ್ಟು ಪರ್ಸೆಂಟ್ ಸರ್ಕಾರ ಎಂದು ಕರೆಯಬೇಕು? ಎಂದು ಪ್ರಶ್ನಿಸಿದರು.

ಪೇಸಿಎಂ ಪ್ರಚಾರ ನಡೆಸಿದ್ದ ಇವರ ಬಗ್ಗೆಯೂ ನಾವು ಹಾದಿಬೀದಿಯಲ್ಲಿ ಪ್ರಚಾರ ನಡೆಸಬೇಕಿದೆ. ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಬೇಕಿದೆ. ಸ್ವತಃ ಅಧಿಕಾರಿಗಳಲ್ಲೇ ರೇಟ್ ಫಿಕ್ಸ್ ಆಗಿದೆ ಅಂತ ಮಾತಾಡ್ತಾ ಇದ್ದಾರೆ ಎಂದು ಅವರು ದೂರಿದರು. ಈಗ ಇವರು ಏನ್​ ಮಾಡ್ತಾ ಇದ್ದಾರೆ ಎನ್ನುವುದನ್ನು ಜನ ಗಮನಿಸುತ್ತಿದ್ದಾರೆ. ಸಾಬೀತು ಮಾಡಿ ಅಂದರೆ ಹೇಗೆ ಮಾಡೋದು? ಹಿಂದೆ 40% ಆರೋಪವನ್ನು ಸಾಬೀತು ಮಾಡಿದ್ದರಾ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಈಗ ಅವರದೇ ಸರ್ಕಾರ ಬಂದಿದೆ, ಪರ್ಸೆಂಟೇಜ್ ಆರೋಪವನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಗ್ಯಾರಂಟಿಗಳ ಬಗ್ಗೆ ಸಚಿವರಿಗೇ ಗ್ಯಾರಂಟಿ ಇಲ್ಲ : ಗ್ಯಾರಂಟಿಗಳ ಬಗ್ಗೆ ಸ್ವತಃ ಸಚಿವರಿಗೆ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಅವರೆಲ್ಲರೂ ಅರಬರೆ ಜ್ಞಾನದಿಂದ ಮಾತನಾಡುತ್ತಿದ್ದಾರೆ. ಅದು ಜನತೆಗೂ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಮುಖ್ಯವಾಗಿ ಗೃಹಲಕ್ಷ್ಮಿ ಕಾರ್ಯಕ್ರಮದಲ್ಲಿ ಮತ್ತೊಂದು ಗೊಂದಲ ತಂದಿಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹೆಚ್​ಡಿಕೆ, ಅವರೊಬ್ಬ ಸಚಿವರಷ್ಟೇ ಅಲ್ಲ, ಬಹುತೇಕ ಎಲ್ಲ ಸಚಿವರಿಗೆ ಗ್ಯಾರಂಟಿಗಳ ಯಾವ ಗ್ಯಾರಂಟಿಯೂ ಇಲ್ಲ ಎಂದರು.

ಇದು ಒಂದು ಕಾರ್ಯಕ್ರಮದ ಗೊಂದಲ ಅಲ್ಲ, ಐದು ಕಾರ್ಯಕ್ರಮಗಳ ಗೊಂದಲ. ಯಾರಿಗೂ ಯಾವ ಸ್ಪಷ್ಟತೆಯೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಗ್ಯಾರಂಟಿಗಳು ಲೇವಡಿಯ ವಸ್ತುವಾಗಿವೆ. ಮಾಧ್ಯಮಗಳಲ್ಲಿ ಕೂಡ ಇವುಗಳ ಬಗ್ಗೆ ಸಾಕಷ್ಟು ನಕಾರಾತ್ಮಕ ವರದಿಗಳು ಬರುತ್ತಿವೆ ಎಂದು ಕುಮಾರಸ್ವಾಮಿ ಅವರು ಉಲ್ಲೇಖ ಮಾಡಿದರು.

ಗೃಹಜ್ಯೋತಿ ಯೋಜನೆಯ ಬಗ್ಗೆ ಹೇಳುವುದೇ ಬೇಡ ಎನಿಸುತ್ತದೆ. ಏಕೆಂದರೆ, ಇಂಧನ ಇಲಾಖೆಯನ್ನು ಮುನ್ನಡೆಸುತ್ತಿರುವ ಸಚಿವರಾದ ಜಾರ್ಜ್ ಅವರಿಗೆ ಈ ಕಾರ್ಯಕ್ರಮ ಅರ್ಥ ಆಗಿಲ್ಲ. ಅವರು ತಾಳಮೇಳ ಇಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗೆ ಇಲ್ಲ, ಯಾಕೆ ಅಧಿಕಾರಿಗಳು ಅವರಿಗೆ ಮಾಹಿತಿ ನೀಡುತ್ತಿಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಗೃಹಲಕ್ಷ್ಮಿ, ಗೃಹಜ್ಯೋತಿ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅತೀವ ಕುತೂಹಲ, ನಿರೀಕ್ಷೆ ಹುಟ್ಟು ಹಾಕಲಾಗಿತ್ತು. ಕೊನೆಪಕ್ಷ ಆ ಇಲಾಖೆಗಳನ್ನು ಮುನ್ನಡೆಸುವ ಇಬ್ಬರೂ ಸಚಿವರಿಗೆ ಈ ಕಾರ್ಯಕ್ರಮಗಳ ಬಗ್ಗೆ ಖಾತರಿ, ಸ್ಪಷ್ಟತೆ ಇಲ್ಲ ಎನ್ನುವುದು ಅವರ ಹೇಳಿಕೆಗಳಿಂದ ಗೊತ್ತಾಗುತ್ತದೆ. ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು ಎನ್ನುವುದು ನನಗೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಈಗ ನೋಡಿದರೆ ಸರ್ಕಾರ ಸಬೂಬುಗಳ ಪಟ್ಟಿ ಮಾಡಿಕೊಂಡು ಕಾಲಹರಣ ಮಾಡುತ್ತಿದೆ. ಜನರ ನಂಬಿಕೆಯ ಹರಣ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

ಇಂಧನ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ, ನಡೆದಿದೆ ಎನ್ನುವ ಮಾಹಿತಿ ನನಗೂ ಇದೆ. ಹಿಂದೆ ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್ ಆಗಿದ್ದರು. ಆಗ ಇಂಧನ ಇಲಾಖೆಯಲ್ಲಿ ನಡೆದ ಅಕ್ರಮಗಳ ತನಿಖೆಗೆ ಜಂಟಿ ಸದನ ಸಮಿತಿ ರಚನೆ ಮಾಡಲಾಯಿತು. ಮುಕ್ತ ಮಾರುಕಟ್ಟೆಯಲ್ಲಿ 2.30 ರೂಪಾಯಿಗೆ ಲಭ್ಯವಿದ್ದ ಸೋಲಾರ್ ವಿದ್ಯುತ್ತನ್ನು 9.50 ರೂಪಾಯಿ ಕೊಟ್ಟು ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವಿಚಿತ್ರವೆಂದರೆ, ಆ ಸದನ ಸಮಿತಿ ಕಥೆ ಏನಾಯಿತು ಎಂದರೆ ಕುರಿ ಕಾಯಲು ತೊಳವನ್ನೆ ಬಿಟ್ಟಂತೆ ಆಯಿತು. ಈಗ ನಾನು ಕೇಳುತ್ತೇನೆ, ತಾಕತ್ತು ಇದ್ದರೆ ಈಗ ಆ ಒಪ್ಪಂದವನ್ನು ರದ್ದು ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಅವರು ಸವಾಲು ಹಾಕಿದರು.

ಈ ಒಪ್ಪಂದದ ಬಗ್ಗೆ ಸಾಕಷ್ಟು ದೂರು ಬಂದ ಬೆನ್ನಲ್ಲೇ ಅಂದು ನಾನು ವಿಧಾನಸಭೆಯಲ್ಲಿ ಚರ್ಚೆ ಮಾಡಿದೆ. 25 ವರ್ಷಕ್ಕೆ ಅಗ್ರಿಮೆಂಟ್ ಮಾಡಿದ್ದು ಸರಿಯಲ್ಲ ಎಂದು ನಾನೇ ನೇರವಾಗಿ ಹೇಳಿದೆ. ಸದನ ಸಮಿತಿಗೂ ನಾನು ಹೇಳಿದ್ದೆ. ಆದರೆ ಅಲ್ಲಿಗೆ ತೋಳವನ್ನೇ ತಂದರೆ ಹೇಗೆ.. ಕುರಿ ಕಾಯೋಕೆ ತೋಳ ತಂದ ಹಾಗಾಯ್ತು ಅಷ್ಟೇ ಎಂದು ಅವರು ಹೇಳಿದರು.

2013-18ರಲ್ಲಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಅಕ್ರಮ ಅದಿರು ಸಾಗಣೆ ಕುರಿತಂತೆ ಸದನ ಸಮಿತಿ ರಚನೆ ಮಾಡಲಾಗಿತ್ತು. ಸುದೀರ್ಘ ಪರಿಶೀಲನೆ ನಂತರ ಹೆಚ್.ಕೆ. ಪಾಟೀಲ್ ಅವರು ಒಂದು ವರದಿ ನೀಡಿದ್ದರು. ಬಿಜೆಪಿಯನ್ನು 40 ಪರ್ಸೆಂಟ್ ಪಾರ್ಟಿ ಎಂದವರು ಈ ವರದಿಯನ್ನು ಬಹಿರಂಗಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.

ಆ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶಗಳಿವೆ. 35 ಕೋಟಿ ಟನ್ ಅದಿರು ಅಕ್ರಮವಾಗಿ ರಫ್ತಾಗಿದೆ ಎನ್ನುವುದನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆ ಅದಿರಿನ ಮೌಲ್ಯ 1.43 ಲಕ್ಷ ಕೋಟಿ ರೂಪಾಯಿ! ಅಂದು ಹೆಚ್.ಕೆ. ಪಾಟೀಲ್ ಅವರು ಕೊಟ್ಟ ಈ ವರದಿಯಲ್ಲಿ ಈ ವಿಚಾರ ಅಡಗಿದೆ. ಈ ವರದಿಯನ್ನು ಅಂದು ಮುಖ್ಯಮಂತ್ರಿಗಳು ತಮ್ಮ ಸೀಟ್ ಕೆಳಗೆ ಇಟ್ಟುಕೊಂಡಿರಲ್ಲ, ಅದನ್ನು ಈಗ ಬಹಿರಂಗ ಮಾಡಿ. ಅದನ್ನು ತಿಂದವರಿಂದ ಹೊರಗೆ ಕಕ್ಕಿಸಿದರೆ ಈ ಗ್ಯಾರಂಟಿಗಳಿಗೆ ಹಣ ಕೊಡಬಹುದು ಎಂದು ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ ಹೇಳಿದರು.

ಪಠ್ಯ ಗೊಂದಲ ಬೇಡ : ಪಠ್ಯ ಪುಸ್ತಕ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಮಕ್ಕಳ ವಿಚಾರದಲ್ಲಿ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ. ಹಿಂದಿನ ಸರ್ಕಾರ ಈಗಾಗಲೇ ಪಠ್ಯ ಬದಲಾವಣೆ ಮಾಡಿದೆ. ಆ ಬಗ್ಗೆ ಸಾಕಷ್ಟು ಗೊಂದಲ ಆಗಿತ್ತು. ಈಗ ಈ ಸರ್ಕಾರವೂ ಅದೇ ದಾರಿಯಲ್ಲಿ ಇದೆ. ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಪಠ್ಯ ಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ಕಳಿಸಲಾಗಿದೆ. ಇದು ಜನರ ದುಡ್ಡಲ್ಲವೇ? ಎಂದು ಅವರು ಹೇಳಿದರು.

ಮಕ್ಕಳಿಗೆ ಪರಿಶುದ್ಧ ವಾತಾವರಣ ಸೃಷ್ಟಿ ಮಾಡಬೇಕು. ಮಕ್ಕಳಿಗೆ ಒಳ್ಳೆಯ ಜ್ಞಾನ ತುಂಬಬೇಕು. ದ್ವಂದ್ವ ಹೇಳಿಕೆಗಳನ್ನು ನೀಡುವ ಮೂಲಕ ಅವರ ಮೇಲೆ ಪರಿಣಾಮ ಬೀಳುವಂತೆ ಮಾಡುವುದು ಬೇಡ. ಸರ್ಕಾರವು ಪ್ರಾರಂಭಿಕ ಹಂತದಲ್ಲಿಯೇ ಈ ರೀತಿಯ ಗೊಂದಲ ಬಿತ್ತನೆ ಮಾಡಿದರೆ ಹೇಗೆ? ಇನ್ನೂ ಐದು ವರ್ಷದ ಕಥೆ ಏನು? ಎನ್ನುವುದು ನನ್ನ ಪ್ರಶ್ನೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ