Breaking News

ಸಚಿವ ಎಂ ಬಿ ಪಾಟೀಲ್​ – ಶಾಸಕ ಯತ್ನಾಳ್​ ಮಧ್ಯೆ ಟ್ವೀಟ್ ವಾರ್

Spread the love

ವಿಜಯಪುರ: ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಸಚಿವ ಎಂ. ಬಿ ಪಾಟೀಲ​ ನೀಡಿದ ಎಚ್ಚರಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ನಗರ ಶಾಸಕ ಬಸನಗೌಡ ಪಾಟೀಲ​ ಯತ್ನಾಳ್​, ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎಂದು ತಿರುಗೇಟು ನೀಡಿದ್ದಾರೆ.

 

ನೂತನ ಸಚಿವರಾಗಿ ಮೊನ್ನೆ ಎಂ. ಬಿ. ಪಾಟೀಲ ಅವರು ವಿಜಯಪುರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗೋಷ್ಟಿಯಲ್ಲಿ ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ​ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಮಾತನಾಡಿ, ಅವರು ಇದೇ ರೀತಿ ವರ್ತನೆ ತೋರಿದರೆ ಜೈಲಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದಕ್ಕೆ ಯತ್ನಾಳ್​ ತಮ್ಮ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ‘ಯಾರೇ ಮಾತಾಡಿದರೂ ಜೈಲಿಗೆ ಹಾಕ್ತೀವಿ ಅಂತ ಹೇಳೋಕೆ ಇದು ತಾಲಿಬಾನ್ ಆಡಳಿತ ಅಲ್ಲ. ಕರ್ನಾಟಕ ಎನ್ನುವುದನ್ನು ಸಚಿವ ಎಂ. ಬಿ. ಪಾಟೀಲರು ಮರೆಯಬಾರದು’ ಎಂದು ಹೇಳಿದ್ದಾರೆ.

 

 

‘ಜೈಲಿಗೆ ಕಳಿಸ್ತೀವಿ’ ಎಂದು ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರಾ? ಎಂದು ಪ್ರಶ್ನೆ ಮಾಡಿರುವ ಯತ್ನಾಳ್​, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಂತ್ರಿಗಳು ಅಸಹಿಷ್ಣುಗಳು ಆಗಬಾರದು ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಕಳೆದ ನಾಲ್ಕು ವರ್ಷ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು?: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಎಂ.ಬಿ. ಪಾಟೀಲ, ಯತ್ನಾಳ್ ಅವರೇ, ಕಳೆದ ನಾಲ್ಕು ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್ ಎಂದೆಲ್ಲಾ ನೀವು ಅಣಿಮುತ್ತು ಉದುರಿಸುವಾಗ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು? ಸತತವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದು ಎಂ.ಬಿ. ಪಾಟೀಲರು ತೀಕ್ಷ್ಣವಾಗಿ ತಿರುಗೇಟು ನೀಡಿ ಮರು ಟ್ವೀಟ್ ಮಾಡಿದ್ದಾರೆ.

 

 

ಇದಕ್ಕೆ ಮರು ಟ್ವೀಟ್​ ಮಾಡಿರುವ ಶಾಸಕ ಯತ್ನಾಳ್​, ಸಂವಿಧಾನ ವಿರೋಧಿ ಅಥವಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರೋಧವಾಗಿದ್ದರೆ ಯಾವ ನ್ಯಾಯಾಲಯ ಯೋಗಿ ಮಾಡೆಲ್ ವಿರುದ್ಧ ತೀರ್ಪು ನೀಡಿದೆ ಎಂ. ಬಿ ಪಾಟೀಲರೇ. ನಿಮ್ಮ ನಾಯಕರನ್ನು ಮತ್ತು ಬಾಂಧವರನ್ನು ಸಂತೋಷಪಡಿಸುವ ಭರದಲ್ಲಿ ಏನೋ ಮಾಡಿಬಿಡುತ್ತೇವೆ ಎಂದು ಮೆರೆಯಬೇಡಿ! ನಾನು ಹೇಳಿದ್ದು ದೇಶವಿರೋಧಿ ಚಟುವಟಿಕೆ ನಡೆಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು, ನನ್ನ ಮಾತಿಗೆ ಈಗಲೂ ನಾನು ಬದ್ಧ ಎಂದು ಹೇಳಿದ್ದಾರೆ.

 

 

ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಾವರ್ಕರ್​ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಚಕ್ರವರ್ತಿ ಸೂಲಿಬೆಲೆ, ಆಡಳಿತಕ್ಕೆ ಬಂದ ಒಂದೇ ವಾರದಲ್ಲಿ ಕಾಂಗ್ರೆಸ್​ ಸರ್ಕಾರ ಹಿಟ್ಲರ್​ ನೀತಿಯನ್ನು ಅನುರಿಸುತ್ತಿದೆ. ನಮ್ಮ ಕಾರ್ಯಕ್ರಮವನ್ನು ತಡೆಯುವ ಪ್ರಯತ್ನ ನಡೆಸಿತ್ತು ಎಂದು ಹೇಳಿದ್ದರು.

ಇದಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ್ದ ಸಚಿವ ಎಂ ಬಿ ಪಾಟೀಲ್​ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ನೀವು ಮಾಡಿರುವ ಅನಾಹುತಗಳನ್ನು ನಾವು ಸರಿ ಪಡಿಸುತ್ತಿದ್ದೇವೆ. ನಾಟಕ ಮಾಡಿದ್ರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಬಿಜೆಪಿಯಿಂದ ವಿರೋಧ.. ಸಚಿವ ಎಂ ಬಿ ಪಾಟೀಲ್​ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಕೋಟ ಶ್ರೀನಿವಾಸ್​ ಪೂಜಾರಿ, ಸುನೀಲ್​ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.


Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ