Breaking News

ಅಖಂಡ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿರುವುದು ಅತ್ಯಂತ ನೋವು ತಂದಿದೆ.:ಸಚಿವ ಬಿ ನಾಗೇಂದ್ರ

Spread the love

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿರುವುದು ಅತ್ಯಂತ ನೋವು ತಂದಿದೆ.

ವಿಜಯನಗರ ಜಿಲ್ಲೆಯ ಜನಪ್ರತಿನಿಧಿಗಳು ಮತ್ತೆ ಒಂದು ಮಾಡೋಕೆ ಒಪ್ಪಿದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಯುವಜನ ಸೇವಾ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರು ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ ಅವರು, ವಿಶ್ವ ಪ್ರಸಿದ್ಧ ಹಂಪಿ, ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಸೇರಿದಂತೆ ಇತರ ಪ್ರೇಕ್ಷಣೀಯ ಸ್ಥಳಗಳು ನಮ್ಮ ಜಿಲ್ಲೆಯಿಂದ ದೂರವಾಗಿವೆ, ಇದು ನಮಗೆ ಅತ್ಯಂತ ನೋವು ತಂದಿದೆ. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ನಾವೆಲ್ಲರೂ ಅಣ್ಣತಮ್ಮಂದಿರಂತೆ ಇದ್ದೇವೆ. ಮತ್ತೆ ಅಖಂಡ ಬಳ್ಳಾರಿ ಮಾಡಬೇಕೆನ್ನುವ ಆಸೆಯಲ್ಲಿ ತಪ್ಪಿಲ್ಲ. ಈ ಹಿಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೆ ಅಖಂಡ ಜಿಲ್ಲೆಯನ್ನು ಒಂದು ಮಾಡುವುದಾಗಿ ಹೇಳಿದ್ದೆವು. ಸ್ಥಳೀಯರ ಗಮನಕ್ಕೆ ತಂದು, ಅವರೆಲ್ಲರೂ ಒಪ್ಪುವುದಾದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚೆರ್ಚಿಸುವೆ ಎಂದರು.

ಬಳ್ಳಾರಿಯಲ್ಲಿ ಇನ್ಮುಂದೆ ರೌಡಿಗಳು ಬಾಲ ಬಿಚ್ಚುವಂತಿಲ್ಲ: ರಾಜ್ಯದ ಜನರು ಜನಪರ, ಉತ್ತಮ ಆಡಳಿತ ನಡೆಸಲು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ, ಅವರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ಅಭಿವೃದ್ಧಿಯೇ ನಮ್ಮ ಮೊದಲ ಗುರಿ, ಬಡಜನರ ಸೇವೆಯೇ ನಮ್ಮ ಆದ್ಯತೆ, ನಮ್ಮ ಅವಧಿಯಲ್ಲಿ ದೌರ್ಜನ್ಯ, ದಬ್ಬಾಳಿಕೆ, ರೌಡಿಸಂಗೆ ಅವಕಾಶವಿಲ್ಲ. ಒಂದು ವೇಳೆ ಬಾಲ ಬಿಚ್ಚಿದರೆ ಖಂಡಿತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಬಳ್ಳಾರಿಯ ಜನರು ಉತ್ತಮ ಆಡಳಿತ ನಡೆಸಲು ಆಶೀರ್ವದಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕು ಎನ್ನುವ ಆಶಯ ನಮ್ಮದು. ಜಿಲ್ಲೆಯಲ್ಲಿ ದೌರ್ಜನ್ಯ, ರೌಡಿಸಂ, ದಬ್ಬಾಳಿಕೆಗೆ ಅವಕಾಶವೇ ಇಲ್ಲ. ಯಾರೂ ಕೂಡ ಬಾಲ ಬಿಚ್ಚಂಗಿಲ್ಲ. ಇದಕ್ಕಾಗಿಯೇ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವೆ ಎಂದರು.

ಜಿಲ್ಲೆ ಅಭಿವೃದ್ಧಿ ಜೊತೆಗೆ ಶಾಂತವಾಗಿರಬೇಕು, ಪ್ರತಿಯೊಬ್ಬರೂ ನೆಮ್ಮದಿಯಿಂದ, ಸಹಬಾಳ್ವೆಯಿಂದ ಜೀವನ ನಡೆಸಬೇಕು. ಬಾಲ ಬಿಚ್ಚಿದರೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುವೆ. ತಿದ್ದಿಕೊಳ್ಳಲು ಒಮ್ಮೆ ಅವಕಾಶ ನೀಡಲಾಗುವುದು. ಆದರೆ ಮತ್ತೆ ಜನರಿಗೆ ತೊಂದರೆ ನೀಡಲು ಮುಂದುವರೆಸಿದರೆ ಮುಲಾಜಿಲ್ಲದೇ ಜೈಲಿಗೆ ಕಳಿಸಲಾಗುವುದು. ರೌಡಿಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ್ರೆ ನಾವು ಸಹಿಸುವುದಿಲ್ಲ, ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ತೀರಾ ಗಂಭೀರ ಪ್ರಕರಣಗಳು ಕಂಡು ಬಂದರೆ ಗಡಿಪಾರು ಎಂದು ಸಚಿವ ಬಿ ನಾಗೇಂದ್ರ ಖಡಕ್ ಎಚ್ಚರಿಕೆ ರವಾನಿಸಿದರು.

ವಿಮ್ಸ್ ಹಗರಣಗಳ ವಿಚಾರಣೆ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌) ಇನ್ನು ಮುಂದೆ ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌) ಆಗಲಿದೆ. ಇಲ್ಲಿನ ಟೆಂಡರ್‌ಗಳೂ ಸೇರಿದಂತೆ ಎಲ್ಲ ಹಗರಣಗಳನ್ನು ಕುರಿತು ವಿಚಾರಣೆ ನಡೆಸಲಾಗುವುದೆಂದು ಸಚಿವ ನಾಗೇಂದ್ರ ಸ್ಪಷ್ಟಪಡಿಸಿದರು. ವಿಮ್ಸ್‌ನಲ್ಲಿರುವ ಗುಂ‍ಪುಗಾರಿಕೆ ಕುರಿತು ಸಂಪೂರ್ಣ ಮಾಹಿತಿ ಇದೆ. ಅಲ್ಲಿ ನಡೆಯುವ ವ್ಯವಹಾರ, ದಂಧೆಗಳ ಬಗ್ಗೆಯೂ ಗೊತ್ತಿದೆ. ಮಾಹಿತಿ ಹಕ್ಕು ಕಾರ್ಯಕರ್ತರ ಹೆಸರಿನಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎಂಬುದೂ ತಿಳಿದಿದೆ ಎಂದು ಸಚಿವ ನಾಗೇಂದ್ರ ತಿಳಿಸಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ