Breaking News

ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಗ್ಯಾರಂಟಿ ; ಯೋಜನೆಯಿಂದ ವಂಚಿತರಾಗಲಿರುವ ಕರಾವಳಿ ಮಹಿಳೆಯರು

Spread the love

ಮಂಗಳೂರು : ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಮಂಜೂರು ಮಾಡಿದೆ.

ಈ ಐದು ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಾಗಿದ್ದು, ಈ ಯೋಜನೆಯಿಂದ ಕರ್ನಾಟಕ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಮಹಿಳೆಯರು ವಂಚಿತರಾಗಲಿದ್ದಾರೆ.

ರಾಜ್ಯದ ಮಹಿಳೆಯರಿಗೆ ದೊರೆತ ಉಚಿತ ಬಸ್ ಭಾಗ್ಯ ಕರಾವಳಿಯ ಮಹಿಳೆಯರಿಗೆ ಮರೀಚಿಕೆಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಗಿಂತ ಖಾಸಗಿ ಬಸ್ ಗಳದ್ದೇ ಪ್ರಾಬಲ್ಯವಿದೆ. ಕೇವಲ ಮಂಗಳೂರು ನಗರದೊಳಗಡೆ 362 ಖಾಸಗಿ ಸಿಟಿ ಬಸ್ ಗಳು ಸಂಚರಿಸುತ್ತಿವೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ, ಉಡುಪಿ ನಗರದಲ್ಲಿ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಖಾಸಗಿ ಬಸ್​ಗಳು ಅತಿ ಹೆಚ್ಚು ಓಡಾಡುತ್ತವೆ. ಇದರ ಪರಿಣಾಮ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣದ ಸೌಲಭ್ಯದಿಂದ ಕರಾವಳಿಯ ಮಹಿಳೆಯರು ವಂಚಿತರಾಗಲಿದ್ದಾರೆ.

ಖಾಸಗಿ ಬಸ್​ಗಳಲ್ಲಿ ಪ್ರಯಾಣಕ್ಕೆ ಒತ್ತಾಯ : ಕರಾವಳಿಯಲ್ಲಿ ಸುಮಾರು 30 ಪ್ರತಿಶತ ಮಹಿಳೆಯರು ದಿನನಿತ್ಯವೂ ಬಸ್ ನಲ್ಲಿ ಓಡಾಡುತ್ತಾರೆ ಎಂದು ಅಂದಾಜಿಸಲಾಗಿದೆ. ಮಂಗಳೂರು ನಗರದೊಳಗಡೆ ಸರ್ಕಾರದ 30 ನಗರ ಸಾರಿಗೆ ಬಸ್​ಗಳು ಮಾತ್ರ ಸಂಚರಿಸುತ್ತವೆ. ಮಿಕ್ಕಂತೆ ಇಲ್ಲಿ ಖಾಸಗಿ ಬಸ್ ಗಳದ್ದೇ ಪ್ರಾಬಲ್ಯ ಇದೆ. ಇದೀಗ ಕರಾವಳಿಯ ಖಾಸಗಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಲು ಕಾರ್ಕಳ ಶಾಸಕ ಸುನೀಲ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಖಾಸಗಿ ಬಸ್​ನಲ್ಲಿ ಉಚಿತ ಪ್ರಯಾಣ ಅವಕಾಶ : ಇನ್ನು ಇದೇ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ, ಈಗಾಗಲೇ ಖಾಸಗಿ ಬಸ್​ಗಳಲ್ಲಿ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಪ್ರಯಾಣಿಕರ ಪಾಸ್ ಅನ್ನು ನೀಡಿದೆ. ಈ ಮೂಲಕ ವಾರ್ಷಿಕ 15 ಕೋಟಿ ರೂ.ಅನ್ನು ಬಸ್ ಮಾಲೀಕರ ಸಂಘದಿಂದಲೇ ಭರಿಸಲಾಗುತ್ತದೆ. ಕೆಎಸ್​ಆರ್​ಟಿಸಿ ಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶುಲ್ಕವನ್ನು ಸರ್ಕಾರ ಭರಿಸುವ ರೀತಿ ಖಾಸಗಿ ಬಸ್ಸಿಗೂ ನೀಡಿದ್ದಲ್ಲಿ ನಮ್ಮಲ್ಲೂ ಉಚಿತ ಪ್ರಯಾಣದ ಅವಕಾಶ ನೀಡುತ್ತೇವೆ ಎಂದು ಹೇಳಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಓಡಾಡುತ್ತಿದ್ದ ಸರ್ಕಾರಿ ಕೆಎಸ್​ಆರ್​ಟಿಸಿ ಬಸ್​ಗಳು ಕೊರೊನಾ ಕಾಲದ ನಂತರ ತಮ್ಮ ಸಂಚಾರವನ್ನು ಸ್ಥಗಿತಗೊಳಿಸಿಲಾಗಿತ್ತು. ಈ ಕಾರಣದಿಂದಾಗಿ ಸೇವೆಯಲ್ಲಿ ಬಹಳಷ್ಟು ವ್ಯತ್ಯಯ ಕಂಡು ಬಂದು ಉಭಯ ಜಿಲ್ಲೆಗಳ ಪ್ರಯಾಣಿಕರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರದಿಂದ ಮಂಜೂರಾಗಿ ಪರವಾನಿಗೆ ಪಡೆದ ಎಲ್ಲಾ ಕೆಎಸ್​ಆರ್​ಟಿಸಿ ಬಸ್ಸುಗಳ ಸಂಚಾರ ಸೇವೆಯನ್ನು ಮುಂದುವರಿಸಲು ಈ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಕೆಲವೊಂದು ರಸ್ತೆಗಳಲ್ಲಿ ಮಾತ್ರ ಸರ್ಕಾರಿ ಬಸ್​ಗಳು ಸಂಚಾರ ನಡೆಸುತ್ತಿವೆ. ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗುವವರಿಗೆ ಸರ್ಕಾರಿ ಬಸ್ ಗಳೇ ಅನಿವಾರ್ಯವಾಗಿದೆ. ಸರ್ಕಾರಿ ಬಸ್ ಗಳಲ್ಲೂ 30% ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಮೂಲಕ ಸರ್ಕಾರದ ಯೋಜನೆಗಳು ನಗರವಾಸಿಗಳಿಗಿಂತ ಈ ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗಲಿದೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಮಹಿಳಾ ಪ್ರಯಾಣಿಕರು ಸರ್ಕಾರದ ಉಚಿತ ಬಸ್ ಪ್ರಯಾಣದ ಯೋಜನೆಯಿಂದ ವಂಚಿತರಾಗಲಿದ್ದಾರೆ.


Spread the love

About Laxminews 24x7

Check Also

ಐನಾಪೂರ ಗ್ರಾಮದ ಕಾರಿಮಠ ವಸತಿ ಪ್ರದೇಶದ ವಾಲ್ಮೀಕಿ ನಾಯಕ ಸಮುದಾಯದವರಿಂದ ಸನ್ಮಾನ

Spread the loveಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಇಂದು ಸನ್ಮತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನೋದ್ ಬರಗಾಲೆ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ