ಬೆಳಗಾವಿ: ನಾಲ್ಕು ಜನರು ಸಾಗುತ್ತಿದ್ದ ಬೈಕ್ ಬಸ್ ಗೆ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, ಇತರ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಖಾನಾಪುರ ತಾಲೂಕಿನ ಗೋಲಿಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಬೈಕ್ ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬೈಕ್ ನಲ್ಲಿ ಒಂದೇ ಕುಟುಂಬದ ನಾಲ್ವರು ತೆರಳುತ್ತಿದ್ದರು.
ಯಲ್ಲಪ್ಪ ಪ್ರಕಾಶ ವಣ್ಣೂರ(25) ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಪಲ್ಲವಿ ವಣ್ಣೂರ(16), ಐಶ್ವರ್ಯಾ ವಣ್ಣೂರ(15) ಭೀಮಪ್ಪ ಬಸಪ್ಪ ವಣ್ಣೂರ(40) ಗಾಯಗೊಂಡಿದ್ದಾರೆ. ಗಾಯಾಳುಗಳ ದೇಹದ ಭಾಗಗಳು ಛಿದ್ರ ಛಿದ್ರವಾಗಿದ್ದು, ಒಂದು ಗಂಟೆಯಾದರೂ ಸಹ ಆಂಬಲೆನ್ಸ್ ಬಾರದ ಹಿನ್ನೆಲೆಯಲ್ಲಿ ಆ ಮಾರ್ಗವಾಗಿ ಸಾಗುತ್ತಿದ್ದ ಕಾರಲ್ಲಿ ಓರ್ವ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಒಂದು ಗಂಟೆ ತಡವಾಗಿ ಸ್ಥಳಕ್ಕೆ ಆಂಬುಲೆನ್ಸ್ ಬಂದ ಮೇಲೆ ಉಳಿದ ಮೂವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸ್ಥಳೀಯರು ಸಾಗಿಸಿದ್ದಾರೆ.