ಸವದತ್ತಿ: ಶಿಕ್ಷಣ ಇಲಾಖೆಯ ‘ನಮ್ಮ ಶಾಲೆ ನಮ್ಮ ಕೊಡುಗೆ’ಯಡಿ ವಿದ್ಯಾರ್ಥಿಗಳಿಗೆ ಹತ್ತು ಗಣಕಯಂತ್ರ ನೀಡಿದ್ದೇನೆ. ವಿದ್ಯಾರ್ಥಿಗಳು ಇವುಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಹುದ್ದೆ ಹೊಂದವತ್ತ ಮುನ್ನಡೆಯಬೇಕು ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.
ಇಲ್ಲಿನ ಶಾಸಕರ ಮಾದರಿ ಶಾಲೆಯಲ್ಲಿ ಬುಧವಾರ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪಾಲಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಉತ್ತಮ ಶಿಕ್ಷಣ ನೀಡಲು ಶಿಕ್ಷಕರ ಜೊತೆ ಪಾಲಕರ ಸಹಕಾರವೂ ಅಗತ್ಯ ಎಂದರು.
ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಬಿಇಒ ಶ್ರೀಶೈಲ್ ಕರಿಕಟ್ಟಿ ಮಾತನಾಡಿ, ತಾಲ್ಲೂಕಿನಾದ್ಯಂತ 350 ಶಾಲೆಗಳಿವೆ. 66 ಸಾವಿರ ಮಕ್ಕಳು ಹರ್ಷದಿಂದ ಶಾಲೆಗೆ ಹೋಗಿದ್ದಾರೆ ಎಂದರು.
ಶಿಕ್ಷಣ ಇಲಾಖೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಅಕ್ಷರ ದಾಸೋಹ, ಶಾಸಕರ ಮಾದರಿ ಶಾಲೆಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ ಪುರದಗುಡಿ, ಬಸವರಾಜ ಪ್ರಭುನವರ, ವೈ.ಬಿ. ಕಡಕೋಳ, ಮೈತ್ರಾದೇವಿ ವಸ್ತ್ರದ ಹಾಗೂ ಪ್ರಮುಖರು ಇದ್ದರು.