ದೊಡ್ಡಬಳ್ಳಾಪುರ: ಬೆಂಗಳೂರಿನ ರಾಜಾನುಕುಂಟೆಯ ಕಾಕೋಳು ರಸ್ತೆಯಲ್ಲಿ ಅಂದಾಜು ₹7 ಕೋಟಿ ಬೆಲೆ ಬಾಳುವ ಭವ್ಯ ಬಂಗಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಸೋತೇನಹಳ್ಳಿ ಗ್ರಾಮದಲ್ಲಿ ಮನೆ, ಗುಂಜೂರು ಗ್ರಾಮದ ಸಮೀಪದ ಕೃಷಿ ಜಮೀನು, ದೊಡ್ಡಬಳ್ಳಾಪುರದ ಟಿ.ಬಿ.ನಾರಾಯಣಪ್ಪ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ…
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಂಗಸ್ವಾಮಿ ಮನೆಯಲ್ಲಿ ದಾಖಲೆ ಪರಿಶೀಲನೆಯಲ್ಲಿ ದೊರೆತ ಆಸ್ತಿಗಳ ದಾಖಲೆ ಕಂಡು ಖುದ್ದು ಲೋಕಾಯುಕ್ತ ಅಧಿಕಾರಿಗಳೇ ಆಶ್ಚರ್ಯ ಚಕಿತರಾಗಿದ್ದಾರೆ.
ಪಾಲನಜೋಗಹಳ್ಳಿ ನಿವಾಸದಲ್ಲೂ ಶೋಧ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ರಂಗಸ್ವಾಮಿ ಅವರ ಅಳಿಯ ಹಾಗೂ ರಾಜಾಜಿನಗರದ ಕಂದಾಯ ನಿರೀಕ್ಷಕ ಶ್ರೀನಿವಾಸ್ ಅವರ ಬೆಂಗಳೂರಿನ ಮನೆಯಲ್ಲಿಯೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.