ಚಿಕ್ಕೋಡಿ: ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ಎರಡನೇ ಬಾರಿಗೆ ತಾಲ್ಲೂಕಿನ ದೂಧಗಂಗಾ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 18ರಂದು ಮಹಾರಾಷ್ಟ್ರದ ಕೊಲ್ಹಾಪುರದ ನೀರಾವರಿ ಇಲಾಖೆಯ ಸೂಪರಿಟೆಂಡೆಂಟ್ ಎಂಜಿನಿಯರ್ ಸುರವೆ ಹಾಗೂ ಎಇ ಎಬಾಂದಿವಾಡೇಕರ ಅವರನ್ನು ಭೇಟಿ ಮಾಡಿ ನೀರಿನ ಸಮಸ್ಯೆ ಕುರಿತು ಮನವರಿಕೆ ಮಾಡಿ ದೂಧಗಂಗಾ ನದಿಗೆ ನೀರು ಹರಿಸಲು ವಿನಂತಿಸಲಾಗಿತ್ತು. 2-3 ದಿನಗಳಿಂದ ದೂಧಗಂಗಾ ನದಿಗೆ ನೀರು ಹರಿದು ಬರುತ್ತಿದೆ ಎಂದರು.
ಬೇಸಿಗೆಯಲ್ಲಿ ರೈತರಿಗೆ, ಸಾರ್ವಜನಿಕರಿಗೆ ಹಾಗೂ ಜನ, ಜಾನುವಾರುಗಳಿಗೆ ಆಗುತ್ತಿರುವ ತೊಂದರೆ ಗಮನಿಸಿ ದೂಧಗಂಗಾ ನದಿಗೆ ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ನೀರು ಬಿಡುಗಡೆ ಮಾಡಿಸಿದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರಿಗೆ ಈ ಭಾಗದ ರೈತರ ಪರವಾಗಿ ಪೀರಗೌಡ ಪಾಟೀಲ, ರಾಜು ಗುಂಡಕಲ್ಲೆ, ಅರುಣ ದೇಸಾಯಿ, ಪುಂಡಲೀಕ ಖೋತ, ಬಾಳಾಸಾಬ ಪಾಟೀಲ, ಸುದರ್ಶನ ಖೋತ, ಯಕ್ಸಂಬಾದ ಎಲ್ಲ ಪಟ್ಟಣ ಪಂಚಾಯಿತಿ ಸದಸ್ಯರು ದೂಧಗಂಗಾ ನದಿ ತೀದರ ಗ್ರಾಮಸ್ಥರು ಅಭಿನಂದಿಸಿದರು.