ಕಿತ್ತೂರು: ‘ಯಾರ ಒತ್ತಡಕ್ಕೂ ಮಣಿಯದೆ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿ ಕೆಲಸ ಮಾಡಬೇಕು. ಕಚೇರಿಗೆ ಬರುವ ಸಾರ್ವಜನಿಕರಿಗೆ ಜನಸ್ನೇಹಿ ಆಡಳಿತ ನೀಡಬೇಕು’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮನ್ವಯತೆಯಿಂದ ಕೆಲಸ ಮಾಡೋಣ.
ಸಾರ್ವಜನಿಕರಿಗೆ ಒಳ್ಳೆಯ ಆಡಳಿತ ನೀಡುವ ಸಂದೇಶ ಕೊಡೋಣ’ ಎಂದರು.
‘ಎಲ್ಲ ಕೆಲಸಗಳಲ್ಲೂ ಉತ್ತಮ ಗುಣಮಟ್ಟವಿರಲಿ. ಚುನಾವಣೆ ಪ್ರಚಾರದ ವೇಳೆ ನೀವು ಹೋಗದಿರುವ ಊರುಗಳಿಗೆ ನಾನು ಹೋಗಿದ್ದೇನೆ. ಅಲ್ಲಿಯ ಪರಿಸ್ಥಿತಿ ಗಮನಿಸಿದ್ದೇನೆ. ಜಲ ಜೀವನ್ ಮಿಷನ್ ಕಾಮಗಾರಿಯಲ್ಲಿ ತೋಡಿದ ತಗ್ಗುಗಳನ್ನು ಇನ್ನೂವರೆಗೆ ಮುಚ್ಚಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
‘ಕಿತ್ತೂರು ತಾಲ್ಲೂಕಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು ತಹಶೀಲ್ದಾರ್ ಕಚೇರಿಗೆ ಬರಬೇಕು. ಸರ್ವೇ ಇಲಾಖೆಯ ಕಚೇರಿಯು ಇಲ್ಲಿಂದಲೇ ಕಾರ್ಯನಿರ್ವಹಿಸಬೇಕು. ಸುಸಜ್ಜಿತವಾದ ತಾಲ್ಲೂಕು ಆಡಳಿತ ಸೌಧ ನಿರ್ಮಾಣವಾಗಿರುವಾಗ ಸಾರ್ವಜನಿಕರು ಬೇರೆ ಕಡೆಗೆ ಅಲೆದಾಡುವುದು ಸರಿಯಲ್ಲ’ ಎಂದರು.
ನೂತನವಾಗಿ ಇಲ್ಲಿ ನಿರ್ಮಿಸಲಾಗಿರುವ ತಾಲ್ಲೂಕು ಆಡಳಿತ ಸೌಧಕ್ಕೆ ಕಚೇರಿಗಳನ್ನು ಏಕೆ ಸ್ಥಳಾಂತರಿಸಿಲ್ಲ ಎಂದು ಪ್ರಶ್ನಿಸಿದಾಗ, ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರು, ‘ಕಟ್ಟಡದ ಕೆಲಸ ಇನ್ನೂ ಇದೆ. ಈ ಕಾರಣದಿಂದ ಹಸ್ತಾಂತರವಾಗಿಲ್ಲ’ ಎಂದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ ಹುಲಜಿ ಅವರು, ‘ಕಾಮಗಾರಿ ಪೂರ್ಣಗೊಂಡಿದೆ. ನಾವು ಹಸ್ತಾಂತರ ಮಾಡಿದ್ದೇವೆ’ ಎಂದು ಉತ್ತರಿಸಿದರು.
‘ಮುಂಗಾರು ಹಂಗಾಮು ಈಗಾಗಲೇ ಪ್ರಾರಂಭವಾಗಬೇಕಿತ್ತು. ಆದರೆ ವಿಳಂಬವಾಗಿದೆ. ರೈತರು ಬಿತ್ತನೆಗೆ ಭೂಮಿ ಹದ ಮಾಡಿಕೊಂಡಿದ್ದಾರೆ. ಅವರಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿಗೆ ಸೂಚಿಸಿದರು.
‘ಶಾಲೆ ವೇಳೆಗೆ ಅನುಕೂಲವಾಗುವಂತೆ ಬಸ್ ಓಡಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ತೆಗದುಕೊಳ್ಳಬೇಕು’ ಎಂದು ಹೇಳಿದರು.
ಚನ್ನಮ್ಮನ ಕಿತ್ತೂರು ಪಟ್ಟಣದ ಹೊರವಲಯದಲ್ಲಿ 100 ಹಾಸಿಗೆ ಆಸ್ಪತ್ರೆ ಕಟ್ಟಡವನ್ನು ಊರ ಬಳಿಯೇ ನಿರ್ಮಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಎಸ್. ಎಸ್. ಸಿದ್ದಣ್ಣವರ ಅವರಿಗೆ ಸೂಚಿಸಿದರು.
ತಹಶೀಲ್ದಾರ್ ರವೀಂದ್ರ ಹಾದಿಮನಿ ಸ್ವಾಗತಿಸಿದರು. ಪ್ರಭಾರ ಇಒ ಆರ್. ಪಿ. ಖಾನಾಪುರಿ, ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.