ಬೆಂಗಳೂರು : ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಮಹಿಳಾ ಅಧಿಕಾರಿಗೆ ಸ್ವಂತ ಸಹೋದರನೇ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಅಧಿಕಾರಿ ಡಾ. ಮೈತ್ರಿ ನೀಡಿರುವ ದೂರಿನನ್ವಯ ಅವರ ಸಹೋದರ ಡಾ.ಸಂಜಯ್ ವಿರುದ್ಧ ಹಲ್ಲೆ, ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಜಯನಗರದಲ್ಲಿ ತಮ್ಮ ಕುಟುಂಬದೊಂದಿಗೆ ಡಾ. ಮೈತ್ರಿ ವಾಸವಿದ್ದು, ಸಹೋದರ ಡಾ. ಸಂಜಯ್ ಪ್ರತ್ಯೇಕವಾಗಿ ವಾಸವಿದ್ದರು. ಎರಡು ವರ್ಷಗಳಿಂದ ತಾನು ಹೊಸದಾಗಿ ಬ್ಯುಸಿನೆಸ್ ಮಾಡುತ್ತಿದ್ದೇನೆ, ಅದಕ್ಕಾಗಿ ಎರಡು-ಮೂರು ಕೋಟಿ ರೂ ಕೊಡು ಎಂದು ಕೇಳುತ್ತಿದ್ದ. ಆದರೆ ಹಣ ನೀಡಲು ಮೈತ್ರಿ ನಿರಾಕರಿಸಿದ್ದರಂತೆ. ಮೇ 11 ರಂದು ಕರ್ತವ್ಯ ಮುಗಿಸಿಕೊಂಡು ಮೈತ್ರಿಯವರು ಮನೆಗೆ ಬರುವ ಸಮಯಕ್ಕೆ ಸರಿಯಾಗಿ ಮನೆಗೆ ಬಂದಿದ್ದ ಸಂಜಯ್, ಮೈತ್ರಿ ಮೇಲೆ ಮಕ್ಕಳ ಮುಂದೆಯೇ ಹಲ್ಲೆ ಮಾಡಿದ್ದಾನೆ. ಅಲ್ಲದೇ ಹಣ ನೀಡದಿದ್ದಲ್ಲಿ ನಿನ್ನ ಮೇಲೆ ಭಾನಾಮತಿ ಮಾಡಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಡಾ.ಮೈತ್ರಿ ನೀಡಿರುವ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಡಾ. ಸಂಜಯ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.