ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಡಿಕೆ ಶಿವಕುಮಾರ್ ಗರಂ ಆಗಿದ್ದಕ್ಕೆ ಬಿಜೆಪಿ ಶಾಸಕ ಆರ್. ಅಶೋಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಸಭೆ ಕರೆದು ಅಧಿಕಾರಿಗಳಿಗೆ ಆ ರೀತಿ ಮಾತನಾಡಿದ್ದು ಸರಿಯಲ್ಲ ಎಂದು ಅವರು ಹೇಳಿದರು.
ವಿಧಾನಸೌಧದ ಬಳಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಡಿಕೆ ಶಿವಕುಮಾರ್ ಮೊದಲ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ.
ಕಾಂಗ್ರೆಸ್ ಅಂದ್ರ ಗೂಂಡಾಗಿರಿ, ಗೂಂಡಾಗಿರಿ ಅಂದ್ರೆ ಕಾಂಗ್ರೆಸ್ ಅನ್ನುವಂತಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಸರ್ಕಾರ ಬಂದರೂ ಅದೇ ಅಧಿಕಾರಿಗಳು ಇರುತ್ತಾರೆ.” ಎಂದು ಅವರು ಹೇಳಿದರು.
“ಹಿರಿಯ ಅಧಿಕಾರಿಗಳ ಸಭೆ ಕರೆದು, ನೀವುಬಿಜೆಪಿಗೆ ಬೆಂಬಲ ನೀಡಿದ್ದೀರಾ, ಕೇಸರಿ ಶಾಲು ಹಾಕಿದ್ದೀರಾ ಅಂತ ಬೆದರಿಕೆ ಹಾಕುವುದು ಒಳ್ಳೆಯ ನಡವಳಿಕೆಯಲ್ಲ. ಹೊಸ ಸರ್ಕಾರ ಬಂದಿದೆ, 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೀರಿ, ಜೂನ್ 1 ರಿಂದಲೇ ಕೊಡ್ತೀನಿ ಎಂದು ಹೇಳಿದ್ದೀರಿ, ಅದರ ಕಡೆ ಮೊದಲು ಗಮನ ಕೊಡಿ” ಎಂದು ಸರ್ಕಾರದ ವಿರುದ್ಧ ಚಾಟಿ ಬೀಸಿದರು.
“ಮೊದಲು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿ, ಅವುಗಳಿಗೆ ಇನ್ನೂ ನೀವು ಅನುಮತಿ ಕೊಟ್ಟಿಲ್ಲ, ಜನ ಈಗಾಗಲೇ ಕಾಂಗ್ರೆಸ್ ಕೊಡುಗೆಗಳ ಬಗ್ಗೆ ಜಗಳ ಮಾಡುತ್ತಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ. ಮೊದಲು ಜನರಿಗೆ ನೀಡಿರುವ ಭರವಸೆ ಈಡೇರಿಸಿ. ಕೇಸರೀಕರಣ, ನೈತಿಕ ಪೊಲೀಸ್‌ಗಿರಿ ಬಗ್ಗೆ ಮಾತನಾಡಲು ಇನ್ನೂ ಸಮಯ ಇದೆ, ಅಧಿವೇಶನದಲ್ಲಿ ಅದರ ಬಗ್ಗೆ ಚರ್ಚೆ ಮಾಡೋಣ” ಎಂದು ಹೇಳಿದರು.
ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ
ಇನ್ನು ಕಾಂಗ್ರೆಸ್‌ನಲ್ಲಿಡಿಕೆ ಶಿವಕುಮಾರ್ಮತ್ತುಸಿದ್ದರಾಮಯ್ಯನಡುವೆ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಡಿಕೆ ಸುರೇಶ್ ಮತ್ತು ಸಚಿವ ಎಂಬಿ ಪಾಟೀಲ್ ನಡುವೆ ಗಲಾಟೆ ಆಗಿದೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು, “ಇದು ಕಾಂಗ್ರೆಸ್ ಪಕ್ಷದ ಸರ್ಕಾರ ಅಲ್ಲ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಸಮ್ಮಿಶ್ರ ಸರ್ಕಾರ, ಸಮ್ಮಿಶ್ರ ಸರ್ಕಾರ ಹೇಗೆ ನಡೆಯುತ್ತದೆ ಇದೂ ಅದೇ ರೀತಿ ಆಗುತ್ತಿದೆ.” ಎಂದರು.
“ಹತ್ತು ವರ್ಷಗಳ ಹಿಂದೆಯೇ ನಾನು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ಮುಖ್ಯಮಂತ್ರಿಗಳು ಮಾತನಾಡುವಾಗ ಇನ್ನೊಬ್ಬರು ಮಾತನಾಡುವ, ಪ್ರತ್ಯೇಕ ಸಭೆ ಮಾಡುವ ಅಭ್ಯಾಸ ಇರುವುದಿಲ್ಲ, ಆದರೆ ಇಲ್ಲಿ ಸಿದ್ದರಾಮಯ್ಯ ಮಾತನಾಡಿದ ನಂತರ ನಾನು ಮಾತನಾಡಲೇಬೇಕು ಎನ್ನುವ ಚಾಳಿ ಡಿಕೆ ಶಿವಕುಮಾರ್ ಅವರಿಗೆ ಬಂದಿದೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ, ಡಿಸಿಎಂ ಎನ್ನುವ ಹುದ್ದೆ ಸಂವಿಧಾನದಲ್ಲಿ ಎಲ್ಲೂ ಇಲ್ಲ, ಅದು ಜನರ ತೋರಿಕೆಗೆ ನೀಡುವಂತಾದ್ದು,” ಎಂದರು.
“ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರಿಗೆ ಕೌಂಟರ್ ಕೊಡುವಂತೆ ಪ್ರತಿ ಸಭೆಯಲ್ಲಿ ವರ್ತಿಸುತ್ತಿದ್ದಾರೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ ಅನಿಸುತ್ತಿದೆ. ಈಗಲೇ ಬಿಜೆಪಿ, ಕಾಂಗ್ರೆಸ್ ಎಲ್ಲರಿಗೂ ಬೆದರಿಕೆ ಹಾಕುವಂತಹ ವಾತಾವರಣ ಸರ್ಕಾರದಲ್ಲಿದೆ, ಸಿದ್ದರಾಮಯ್ಯ ಯಾಕೆ ಮೌನವಾಗಿದ್ದಾರೆ ಎಂದು ಗೊತ್ತಿಲ್ಲ, ಈ ದೌರ್ಜನ್ಯವನ್ನು ಕರ್ನಾಟಕದ ಜನ ಕ್ಷಮಿಸಲ್ಲ ಎಂದು ಅವರು ಅರ್ಥ ಮಾಡಿಕೊಳ್ಳಬೇಕು” ಎಂದರು.