Breaking News

ಆಪ್ತ ಶಾಸಕರ ಜೊತೆ ಸಿದ್ದರಾಮಯ್ಯ ರಹಸ್ಯ ಸಭೆ

Spread the love

ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಇಂದು ಸಂಜೆ ರಾಜ್ಯ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಲಿದೆ.

ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಇಂದು ನೊಣವಿನಕರೆಯ ಅಜ್ಜಯ್ಯನ ದರ್ಶನಕ್ಕೆ ತೆರಳಿದ್ದಾರೆ. ದೇವರ ಮೊರೆ ಹೋಗಿರುವ ಅವರು ನಗರ ಬಿಡುತ್ತಿದ್ದಂತೆ, ಮತ್ತೋರ್ವ ಪ್ರಬಲ ಆಕಾಂಕ್ಷಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ.

ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಬೈರತಿ ಸುರೇಶ್ ಅವರಿಗೆ ಸಂಬಂಧಿಸಿದ ಪ್ಲಾಟ್​ನಲ್ಲಿ ಸಭೆ ನಡೆದಿದೆ. ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಪ್ರತ್ಯೇಕ ಸಭೆಗೆ ಮುಂದಾದ ಸಿದ್ದರಾಮಯ್ಯ ಈ ರೀತಿ ಆಪ್ತರೊಂದಿಗೆ ಸಮಾಲೋಚನೆ ಆರಂಭಿಸಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ ಬಣದ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಶಾಸಕರಾದ ಕೆ ಜೆ ಜಾರ್ಜ್, ಎಂ ಬಿ ಪಾಟೀಲ್, ದಿನೇಶ್ ಗುಂಡೂರಾವ್, ಜಮೀರ್ ಆಹ್ಮದ್, ಕೃಷ್ಣ ಬೈರೇಗೌಡ, ರಿಜ್ವಾನ್​ ಅರ್ಷದ್, ಪುಟ್ಟರಂಗಶೆಟ್ಟಿ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಇಂದು ಮಧ್ಯಾಹ್ನ ದೆಹಲಿಗೆ ತೆರಳಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಷ್ಟರೊಳಗೆ ಒಂದು ನಿರ್ಧಾರ ಕೈಗೊಳ್ಳಲಿದ್ದಾರೆ. ಖರ್ಗೆ ನಿವಾಸಕ್ಕೆ ಸಿಎಂ ಸ್ಥಾನದ ಇತರೆ ಆಕಾಂಕ್ಷಿಗಳಾಗಿರುವ ಎಂ.ಬಿ. ಪಾಟೀಲ್​, ಆರ್​.ವಿ ದೇಶಪಾಂಡೆ ಸಹ ಭೇಟಿ ನೀಡಿ ಚರ್ಚಿಸಿದ್ದಾರೆ. ಪಕ್ಷದ ಹೈಕಮಾಂಡ್ ನಿರ್ಧಾರ ಏನೇ ಆಗಿರಲಿ, ಸರ್ಕಾರದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಡಿಸಿಎಂಗೆ ಒತ್ತಡ: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಬೆಂಬಲಿಗರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದು, ಡಿಸಿಎಂ ಸ್ಥಾನ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಪೈಪೋಟಿಗೆ ಬ್ರೇಕ್ ಹಾಕಲು ತಂತ್ರಗಾರಿಕೆ ರೂಪಿಸಲಾಗಿದೆ. ಡಿಕೆಶಿ ತಂತ್ರಗಾರಿಕೆಗೆ ಸಿದ್ದರಾಮಯ್ಯ ಬಣದ ಪ್ರತ್ಯೇಕ ಮಾಸ್ಟರ್ ಪ್ಲ್ಯಾನ್ ರೂಪಿಸಲು ಈ ಸಭೆ ನಡೆಸಿದ್ದಾರೆ ಎನ್ನಲಾಗಿದೆ.

ಸಭೆ ಮುಗಿಸಿ ನಂತರ ನೇರವಾಗಿ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚಿಸಿದ್ದಾರೆ. ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡ ಬಳಿಕ ಖರ್ಗೆ ದಿಲ್ಲಿಗೆ ತೆರಳುತ್ತಾರೋ ಅಥವಾ ಮೊದಲೇ ಹೋಗಿ ಬರುತ್ತಾರೋ ಎನ್ನುವ ಮಾಹಿತಿ ಇಲ್ಲ.

ಶಾಸಕ ಕೃಷ್ಣ ಭೈರೇಗೌಡ ಮಾತನಾಡಿ, ಕಾಂಗ್ರೆಸ್​ಗೆ ದೊಡ್ಡಮಟ್ಟದಲ್ಲಿ ಜನ ಆಶೀರ್ವಾದ ಮಾಡಿದ್ದಾರೆ. ಎರಡು ದಶಕಗಳ ನಂತರ ದೊಡ್ಡ ಬಹುಮತ ಕೊಟ್ಟಿದ್ದಾರೆ. ನಮ್ಮ ಮೇಲೆ ನಂಬಿಕೆ ಇಟ್ಟು ಬಹುಮತ ಕೊಟ್ಟಿದ್ದಾರೆ. ಈಗ ಜನರ ನಂಬಿಕೆ ಉಳಿಸಿಕೊಳ್ಳಬೇಕಿರುವುದು ನಮ್ಮ ಜವಾಬ್ದಾರಿ. ಕಳೆದ ನಾಲ್ಕು ವರ್ಷಗಳಿಂದ ಅತ್ಯಂತ ಭ್ರಷ್ಟ ಸರ್ಕಾರದ ವಿರುದ್ಧ ಜನರು ಸಿಡಿದೆದ್ದಿದ್ದರು. ಹಾಗಾಗಿ ಈಗ ನಮ್ಮ ಮೇಲೆ ಜವಾಬ್ದಾರಿ ಇದೆ. ಹಳಿ ತಪ್ಪಿರುವ ಆಡಳಿತ ಬಿಗಿ ಮಾಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಉತ್ತಮ ಆಡಳಿತ ನೀಡಬೇಕಿದೆ ಎಂದಿದ್ದಾರೆ.

ಯಾರು ಸಿಎಂ ಆಗಬೇಕು ಎಂಬ ತೀರ್ಮಾನ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆಯಲಿದೆ. ಬಳಿಕ ವರಿಷ್ಠರು ಅಂತಿಮ ತೀರ್ಮಾನ ಮಾಡುತ್ತಾರೆ. ನಾಯಕರ ತೀರ್ಮಾನವನ್ನೂ ಸುಗಮವಾಗಿ ಮಾಡುತ್ತಾರೆ. ನಾಲ್ಕು ಗೋಡೆಯಲ್ಲಿ‌ ಕುಳಿತು ಸಿಎಂ ಗಾದಿಯನ್ನು ಬಗೆಹರಿಸಿಕೊಳ್ಳುತ್ತೇವೆ. ಇಂದು ನಡೆಯುವುದು ಕಾಂಗ್ರೆಸ್ ಶಾಸಕಾಂಗದ ಔಪಚಾರಿಕ ಸಭೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ದಿನೇಶ್​ ಗುಂಡೂರಾವ್, ರಿಜ್ವಾನ್​ ಅರ್ಷದ್​, ಸಿಎಂ ಆಯ್ಕೆ ಹೈಕಮಾಂಡ್​ಗೆ ಬಿಟ್ಟದ್ದು. ಶಾಸಕಾಂಗ ಸಭೆಯಲ್ಲಿ ನಾವು ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ ಎಂದು ತಿಳಿಸಿದ್ದಾರೆ. ರಹಸ್ಯ ಮಾತುಕತೆ ಮುಗಿಸಿದ ಸಿದ್ದರಾಮಯ್ಯ, ಕನ್ನಿಂಗ್ ಹ್ಯಾಂ ರಸ್ತೆಯಿಂದ ಹೊರಟಿದ್ದಾರೆ. ಇಲ್ಲಿಂದ ನೇರವಾಗಿ ಖರ್ಗೆ ಅವರನ್ನು ಭೇಟಿಯಾಗಿದ್ದು, ಸಮಾಲೋಚಿಸಿದ್ದಾರೆ


Spread the love

About Laxminews 24x7

Check Also

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಹ್ವಾನ ವಿರೋಧಿಸಿ ಮತ್ತೆರಡು ಪಿಐಎಲ್ ಸಲ್ಲಿಕೆ

Spread the loveನಾಡಹಬ್ಬ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್‌ರನ್ನು ಮುಖ್ಯ ಅತಿಥಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ