ಮಂಗಳೂರು: ಸಾರ್ವಜನಿಕ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ. ಇದು ಕಾಂಗ್ರೆಸ್ ಪಕ್ಷದ ಐದನೇ ಗ್ಯಾರಂಟಿ ಯೋಜನೆಯಾಗಿದ್ದು, ಈ ಐದೂ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಲಾಗುವುದು ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಇಂದು ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದಂತ ಅವರು, ಮೊದಿ ಅವರೇ, ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಹೇಳಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ಒಂದು ಸವಾಲು ಹಾಕುತ್ತಿದ್ದೇನೆ. ನಮ್ಮ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ನಾವು ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ನಾವು ಈ ಯೋಜನೆಗಳನ್ನು ಜಾರಿ ಮಾಡಿದ ನಂತರ ನೀವು ದೇಶದಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲು ಸಿದ್ಧರಿದ್ದೀರಾ? ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನ ಕಡಲ ಮೀನುಗಾರರ ಜತೆ ಸಂವಾದ ನಡೆಸಿದ ರಾಹುಲ್ ಗಾಂಧಿ ಅವರು ಮೀನುಗಾರರ ಹಿತರಕ್ಷಣೆಗೆ ಕೆಲವು ಭರವಸೆಗಳನ್ನು ನೀಡಿದರು.
1. ಹತ್ತು ಲಕ್ಷ ರೂ. ವಿಮೆ
2. ಸೀಮೆಯೆಣ್ಣೆ 250 ರಿಂದ 500 ಲೀಟರಿಗೆ ಏರಿಕೆ
3. ಮೀನುಗಾರ ಕುಟುಂಬದ ಮಹಿಳೆಯರಿಗೆ 1,00,000 ರೂ. ಬಡ್ಡಿ ರಹಿತ ಸಾಲ
4. ಮೀನುಗಾರರಿಗೆ ಡೀಸೆಲ್ ಹಾಗೂ ಪೆಟ್ರೋಲ್ ಮೇಲೆ 25 ರೂ. ಸಬ್ಸಿಡಿ
ಕಳೆದ ಕೆಲವು ವರ್ಷಗಳಿಂದ ಇಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಈ ಸರ್ಕಾರವನ್ನು ನೀವು ಆರಿಸಲಿಲ್ಲ. ಈ ಸರ್ಕಾರ ನಿಮ್ಮ ಮತದಿಂದ ರಚನೆಯಾಗಿಲ್ಲ. ಈ ಸರ್ಕಾರವನ್ನು ಬಿಜೆಪಿ ಕಳ್ಳತನದ ಮೂಲಕ ರಚಿಸಿದ್ದಾರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದು, ಭ್ರಷ್ಟಾಚಾರದ ಹಣದಲ್ಲಿ ಶಾಸಕರನ್ನು ಖರೀದಿ ಮಾಡಿದ್ದಾರೆ, ನಿಮ್ಮ ಸರ್ಕಾರವನ್ನು ನಿಮ್ಮಿಂದಲೇ ಕಳ್ಳತನ ಮಾಡಿದ್ದಾರೆ. ಕಳ್ಳತನ ಇವರಿಗೆ ಅಭ್ಯಾಸವಾಗಿದೆ. ಸರ್ಕಾರವಾಗಲಿ, ಶಾಸಕರಾಗಲಿ, ಗುತ್ತಿಗೆ, ಸಕ್ಕರೆ ಕಾರ್ಖಾನೆ ಎಲ್ಲವನ್ನು ಇವರು ಕದಿಯುತ್ತಾರೆ. ಬಿಜೆಪಿ ನಾಯಕರು ಹೇಳುತ್ತಾರೆ. ಈ ಚುನಾವಣೆ ಕರ್ನಾಟಕವನ್ನು ಮೋದಿ ಕೈಗೆ ಕೊಡುವ ಚುನಾವಣೆ ನೀಡುವುದಾಗಿದೆ ಎಂದು. ಈಗಲೂ ರಾಜ್ಯ ಬಿಜೆಪಿ ಕೈಯಲ್ಲಿದೆ. ಇದು ಭವಿಷ್ಯವನ್ನು ಮೋದಿ ಅವರ ಕೈಗೆ ಕೊಡಿ ಎನ್ನುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಇರುವ ಭ್ರಷ್ಟಾಚಾರದ ಸರ್ಕಾರ ಬೇಕಾ? ಇವರು ಯಾವುದೇ ವಿಚಾರದಲ್ಲೂ 40% ಕಮಿಷನ್ ತೆಗೆದುಕೊಳ್ಳುತ್ತಾರೆ. ಬಿಜೆಪಿಯಲ್ಲಿ 2500 ಕೋಟಿಗೆ ಮುಖ್ಯಮಂತ್ರಿ ಹುದ್ದೆ ಸಿಗುತ್ತದೆ ಎಂದು ಬಿಜೆಪಿ ಶಾಸಕರೇ ಹೇಳಿದ್ದಾರೆ ಎಂದರು.
ಗುತ್ತಿಗೆದಾರರ ಸಂಘ, ರುಪ್ಸಾ ಸಂಸ್ಥೆ ರಾಜ್ಯದಲ್ಲಿ ಎಲ್ಲಾ ಕೆಲಸಗಳಿಗೆ 40% ಕಮಿಷನ್ ಪಡೆಯಲಾಗುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದು, ಆ ಪತ್ರಕ್ಕೆ ಉತ್ತರ ನೀಡುವುದಿರಲಿ, ಆ ಪತ್ರವನ್ನು ಪ್ರಧಾನಿ ಮೋದಿ ಅವರು ಸ್ವೀಕರಿಸಿಲ್ಲ. ದಿಂಗಾಲೇಶ್ವರ ಸ್ವಾಮೀಜಿಗಳು ಬಿಜೆಪಿ ಸರ್ಕಾರ ಮಠಗಳಿಗೆ ವಿನಾಯಿತಿ ನೀಡಿ 30% ಕಮಿಷನ್ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಇದು ಬಿಜೆಪಿಯ ಭ್ರಷ್ಟಾಚಾರ ಧರ್ಮ. ಬಿಜೆಪಿ ಶಾಸಕನ ಪುತ್ರ ಲಂಚ ಪಡೆಯುವಾಗ 8 ಕೋಟಿ ಹಣದೊಂದಿಗೆ ಸಿಕ್ಕಿ ಬೀಳುತ್ತಾನೆ. ಈ ಸರ್ಕಾರ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರು, ಕಿರಿಯ ಇಂಜಿನಿಯರ್ ಸೇರಿದಂತೆ ಎಲ್ಲಾ ಇಲಾಖೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಸರ್ಕಾರದಲ್ಲಿ ಹಗರಣಗಳ ಸರಮಾಲೆ ಇದೆ. ಒಂದೆಡೆ ಭ್ರಷ್ಟಾಚಾರ, ಮತ್ತೊಂದೆಡೆ ಬೆಲೆ ಏಱಿಕೆ, ನಿರುದ್ಯೋಗ ಸಮಸ್ಯೆ. ಈ ಹಿಂದೆ ಪೆಟ್ರೋಲ್ 60 ರೂ ಇತ್ತು ಈಗ 100 ರೂ ಆಗಿದೆ. ಅಡುಗೆ ಅನಿಲ ಸಿಲಿಂಡರ್ 400 ರೂ. ಇತ್ತು ಇಂದು 1100 ರೂ. ಆಗಿತ್ತು. ಜಿಎಸ್ ಟಿ ಮೂಲಕ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ನಾಶ ಮಾಡಿದೆ. ನೋಟು ರದ್ಧತಿ ಮೂಲಕ ಬಡವರ ಹಣ ಕಿತ್ತು ಶ್ರೀಮಂತ ಉದ್ಯಮಿಗಳ ಕೈಯಲ್ಲಿ ನೀಡಿದ್ದಾರೆ ಎಂದು ತಿಳಿಸಿದರು.
ಇಂದು ಯಾವ ಪರಿಸ್ಥಿತಿ ಇದೆ ಎಂದರೆ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಏನೇ ಆದರೂ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. 40 ಕೋಟಿ ಜನ ಮತ್ತೆ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ದೇಶದ ಶೇ.1ರಷ್ಟು ಜನರ ಬಳಿ ದೇಶದ ಶೇ.40 ಸಂಪತ್ತು ಇದೆ. 90 ಲಕ್ಷ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಮುಚ್ಚಿವೆ ಇದು ಬಿಜೆಪಿಯ ವಿಕಾಸ. ಭ್ರಷ್ಟಾಚಾರ 40%, ನಿರುದ್ಯೋಗ, ಬೆಲೆ ಏರಿಕೆ ಬಿಜೆಪಿ ಸಾಧನೆ ಎಂದು ಗುಡುಗಿದರು.