ಬೆಂಗಳೂರು: ಸುರೇಶ್ ಗೌಡರು ಒಬ್ಬರು ಸಾಧಕರು. ಇದಕ್ಕೆ ಅವರು ಮಾಡಿರುವ ಕೆಲಸವೇ ಸಾಕ್ಷಿ. ಸುರೇಶ್ ಗೌಡ್ರು 50 ವರ್ಷದಲ್ಲಿ ಆಗುವ ಕೆಲಸವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 5 ವರ್ಷದಲ್ಲಿ ಮಾಡಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ಇಂದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡರ ಪರವಾಗಿ ಗೂಳೂರಿನಲ್ಲಿ ರೋಡ್ ಶೋ ನಡೆಸಿ ಮಾತನಾಡಿ, ಕಳೆದ ಬಾರಿ ಸುರೇಶ ಗೌಡರನ್ನು ಸೋಲಿಸಿ ಅಕ್ರಮವಾಗಿ ಶಾಸಕರಾಗಿ ಆಯ್ಕೆಯಾಗಿತ್ತು. ಸುರೇಶ್ ಗೌಡರು ಕಾನೂನಿನ ನ್ಯಾಯಯದಲ್ಲಿ ಗೆದ್ದಿದ್ದಾರೆ. ಅಲ್ಲಿ ಇವರ ಪರವಾಗಿ ತೀರ್ಪು ಬಂದಿದೆ. ಈಗ ಜನತಾ ನ್ಯಾಯಾಲಯದಲ್ಲಿ ತಾವು ನ್ಯಾಯ ಕೊಡಬೇಕು. ಆ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಯಾವಾಗ ಜನತಾ ನ್ಯಾಯಾಲಯದಲ್ಲಿ ಗೆಲುವು ಸಿಗುತ್ತದೊ ಆಗ ಜರುಗಿದ್ದ ಅನ್ಯಾಯ, ಅಕ್ರಮ ಎಲ್ಲ ಸಕ್ರಮ ಆಗುತ್ತದೆ. ಅಲ್ಲಿಯವರೆಗೂ ನೀವು ವಿಶ್ರಮಿಸಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಮನೆಮನೆಗೆ ಹೋಗಿ ನಮ್ಮ ಸಾಧನೆ ತಿಳಿಸಿ
ಹಗಲು ರಾತ್ರಿ ಪ್ರತಿದಿನ ನೀವೇ ಸುರೇಶ್ ಗೌಡರಾಗಿ ಮನೆಮನೆಗೆ ಹೋಗಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ನಾನು ಮಾಡಿರುವ ಕೆಲಸಗಳನ್ನು, ಯೋಜನೆಗಳನ್ನು ಜನರಿಗೆ ತಿಳಿಸಿ ಎಲ್ಲರ ಮನ ಗೆದ್ದು ಮತ್ತೊಮ್ಮೆ ಕಮಲ ಅರಳಿಸಿ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 54 ಲಕ್ಷ ರೈತರಿಗೆ ಹಣ ದೊರೆತಿದೆ. ತುಮಕೂರು ಗ್ರಾಮಾಂತರದಲ್ಲಿ 30 ಸಾವಿರ ರೈತರಿಗೆ ಯೋಜನೆಯಿಂದ ಪ್ರಯೋಜನ ಆಗಿದೆ. ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಆವಾಸ್ ಯೋಜನೆಗಳು ಕೇಂದ್ರದಿಂದ ಸಿಕ್ಕಿವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.