ಅಥಣಿ: ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಉಪಮುಖ್ಯಮಂತ್ರಿಯೂ ಆದ ಲಕ್ಷ್ಮಣ ಸವದಿ ಕೋಟಿ ವೀರ ಅನ್ನಿಸಿಕೊಂಡಿದ್ದಾರೆ. ತಮ್ಮ ಹಾಗೂ ಪಿತ್ರಾರ್ಜಿತ ಆಸ್ತಿ ಸೇರಿ ಈ ಬಾರಿ ₹ 29.55 ಕೋಟಿ ಆಸ್ತಿ ಹೊಂದಿದ್ದಾಗಿ ಅವರು ಘೋಷಿಸಿಕೊಂಡಿದ್ದಾರೆ.
ಅವರ ಕೈಯಲ್ಲಿ ₹ 7 ಲಕ್ಷ ಹಾಗೂ ಪತ್ನಿ ಕೈಯಲ್ಲಿ ₹ 2 ಲಕ್ಷ ಹಣವಿದೆ. ವಿವಿಧ ಬ್ಯಾಂಕು, ಸಹಕಾರ ಸಂಘಗಳಲ್ಲಿ ₹ 6.66 ಕೋಟಿ ಹಣವನ್ನು ಅವರು ಉಳಿತಾಯ ಮಾಡಿದ್ದಾರೆ.
ಒಟ್ಟು ₹ 4.10 ಕೋಟಿ ಮೌಲ್ಯದ ಕೃಷಿ ಭೂಮಿ, ₹ 2.30 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ಇದೂ ಸೇರಿದಂತೆ ಒಟ್ಟು ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಗಳ ಮೌಲ್ಯ ₹ 29.55 ಕೋಟಿ ಎಂದು ನಮೂದಿಸಿದ್ದಾರೆ.
2018ರಲ್ಲಿ ₹ 27.17 ಲಕ್ಷ ಆದಾಯ ಹೊಂದಿದ್ದ ಲಕ್ಷ್ಮಣ ಸವದಿ ಅವರು 2021ರಲ್ಲಿ ₹ 1.02 ಕೋಟಿ ಆದಾಯ ಗಳಿಸಿದ್ದಾರೆ. ಆದರೆ, 2022ರಲ್ಲಿ ಮತ್ತೆ ಅವರ ಆದಾಯ ಇಳಿಮುಖವಾಗಿದ್ದು ₹ 80.99 ಲಕ್ಷ ಇದೆ.
ಚರಾಸ್ತಿ ಒಟ್ಟು ₹ 6.66 ಕೋಟಿ ಮೌಲ್ಯ, ಸ್ಥಿರಾಸ್ತಿ ಒಟ್ಟು ₹ 2.17 ಕೋಟಿ ಮೌಲ್ಯದ್ದು ಇದೆ. ವಿವಿಧೆಡೆ ₹ 1.97 ಕೋಟಿ ಸಾಲ ಪಡೆದಿದ್ದಾರೆ. 70 ತೊಲಿ ಬಂಗಾರ (₹ 31.50 ಲಕ್ಷ) ಹಾಗೂ 5 ಕೆ.ಜಿ ಬೆಳ್ಳಿ (₹4 ಲಕ್ಷ) ಹೊಂದಿರುವ ಅವರ ಬಳಿ ₹ 39 ಲಕ್ಷದ ವಾಹನಗಳಿವೆ.