ಹುಬ್ಬಳಿ: ಚುನಾವಣೆ ಮುಗಿದ ನಂತರ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಲಕ್ಷ್ಮ ಸವದಿ ಅವರಿಗೆ ಬಂದ ಪರಿಸ್ಥಿತಿ ಬಸವರಾಜ ಬೊಮ್ಮಾಯಿ ಅವರಿಗೆ ಬರಲಿದೆ. ಮುಂದಿನ ಸರದಿ ಅವರದ್ದು. ಅವರನ್ನೂ ಬಳಸಿ ಬಿಸಾಕಿತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ನಗರದ ಮೂರು ಸಾವಿರ ಮಠದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ಕೆಲವು ನಾಯಕರು ಲಿಂಗಾಯತ ಸಮಾಜದ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಸಿ.ಎಂ ಸ್ಥಾನದಿಂದ ಕೆಳಗಿಳಿಸಿದ ನಂತರ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಅವರಿಗೆ ಇರಲಿಲ್ಲ. ಸಮಾಜದ ವಿರೋಧ ವ್ಯಕ್ತವಾದಾಗ ಅನಿವಾರ್ಯವಾಗಿ ಅವರನ್ನು ಸಿ.ಎಂ ಮಾಡಿದರು ಎಂದರು.
ಯಡಿಯೂರಪ್ಪ ಅವರನ್ನು ಬಳಸಿಕೊಂಡು ಆಪರೇಷನ್ ಕಮಲ ಮಾಡಿ ಸರ್ಕಾರ ಬಂದ ನಂತರ ಅವರನ್ನು ಮೂಲೆಗುಂಪು ಮಾಡಿದರು. ಲಕ್ಷ್ಮಣ ಸವದಿ ಅವರಿಗೆ ಮಾತುಕೊಟ್ಟ ರೀತಿ ಟಿಕೆಟ್ ಕೊಡಲಿಲ್ಲ. ಇದನ್ನು ಸಮಾಜ ಗಂಭೀರವಾಗಿ ತೆಗೆದುಕೊಂಡಿದೆ ಎಂದರು.
ನಾವು ಬ್ರಾಹ್ಮಣರ ವಿರೋಧಿಗಳಲ್ಲ. ನಮ್ಮಲ್ಲೂ ಆ ಸಮುದಾಯದ ಹಿರಿಯ ನಾಯಕರಿದ್ದಾರೆ. ಬ್ರಾಹ್ಮಣರಲ್ಲಿ ಕುತಂತ್ರ ಮಾಡುವವರನ್ನಷ್ಟೇ ನಾವು ವಿರೋಧಿಸುತ್ತೇವೆ ಎಂದು ಹೇಳಿದರು.
ಜಗದೀಶ ಶೆಟ್ಟರ್ ಅವರ ಆರೋಗ್ಯ ಚೆನ್ನಾಗಿದೆ. ಅವರ ಮೇಲೆ ಯಾವುದೇ ಆಪಾದನೆಗಳಿಲ್ಲ. ಹೀಗಿದ್ದರೂ ಸಕಾರಣವಿಲ್ಲದೆ ಅವರಿಗೆ ಟಿಕೆಟ್ ತಪ್ಪಿಸಿದರು. ಇದು ಇಡೀ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಹೇಳಿದರು.
ವಿರೋಧ ಪಕ್ಷ ನಾಯಕರಾಗಿ, ಮುಖ್ಯಮಂತ್ರಿಯಾಗಿ ಪಕ್ಷ ಕಟ್ಟಿದ್ದರು. ಹೀಗಿದ್ದರೂ ಅವರ ಮೇಲೆ ದ್ವೇಷ ಸಾಧಿಸಿದರು. ಎರಡನೇ ಹಂತದ ನಾಯಕರನ್ನು ಬೆಳೆಸುವ ಮಾನದಂಡ ತಿಪ್ಪಾರೆಡ್ಡಿ, ಎಸ್.ಸುರೇಶಕುಮಾರ್, ಗೋವಿಂದ ಕಾರಜೋಳ ಅವರಿಗೆ ಏಕೆ ಅನ್ವಯ ಆಗಲಿಲ್ಲ ಎಂದು ಪ್ರಶ್ನಿಸಿದರು.
ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಕಾಂಗ್ರೆಸ್ಗೆ ಬನ್ನಿ ಎಂದು ಆಹ್ವಾನ ಕೊಟ್ಟಿದ್ದೆವು. ಅದು ನಾನು ಕಟ್ಟಿದ ಮನೆ. ಸಂಪೂರ್ಣವಾಗಿ ನಿರಾಕರಣೆ ಮಾಡಿದರೆ ಆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದಿದ್ದರು. ಅದರಂತೆ ಈಗ ಕಾಂಗ್ರೆಸ್ ಗೆ ಬಂದಿದ್ದಾರೆ ಎಂದರು.
ಮೂರು ಸಾವಿರ ಮಠದ ಸ್ವಾಮೀಜಿ ಅವರಿಗೆ ಎಲ್ಲವನ್ನೂ ವಿವರಿಸಲಾಗಿದೆ. ಜಗದೀಶ ಶೆಟ್ಟರ್ ಅವರು ಬಹುಮತದಿಂದ ಆರಿಸಿ ಬರುತ್ತಾರೆ. ಶೆಟ್ಟರ್ ಮತ್ತು ಸವದಿ ಅವರ ಪ್ರಭಾವದಿಂದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ಇನ್ನೂ ಹೆಚ್ಚುವರಿಯಾಗಿ 15 ಸೀಟು ಗೆಲ್ಲುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಮಾತನಾಡಿ, ಜಗದೀಶ ಶೆಟ್ಟರ್ ಅವರ ಅನುಭವದಿಂದ ಕಾಂಗ್ರಸ್ ಗೆ ಖಂಡಿತ ಲಾಭವಾಗಲಿದೆ. ಪಕ್ಷೆದಿಂದಲೂ ಅವರಿಗೆ ಲಾಭ ಆಗುತ್ತದೆ ಎಂದರು.
ಬೆಳಿಗ್ಗೆಯಿಂದ ಸಂಜೆವರೆಗೂ ನಮ್ಮದು ಲಿಂಗಾಯತರ ಪಕ್ಷ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಯಡಿಯೂರಪ್ಪ ಅವರಿಗೆ ಏಕೆ ಅನ್ಯಾಯ ಮಾಡಿದರು ಎಂದು ಪ್ರಶ್ನಿಸಿದರು.
ಎಂ.ಬಿ.ಪಾಟೀಲ ಮತ್ತು ಆರ್.ವಿ.ದೇಶಪಾಂಡೆ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿದರು.
ಮುಖಂಡರಾದ ಪಿ.ವಿ.ಮೋಹನ್, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಬಂಗಾರೇಶ ಹಿರೇಮಠ