ಸುರೇಬಾನ: ನಮ್ಮ ಮನೆಗಳಿಗೆ ಹೋಗಿ ಬರಲು ದಾರಿ ಇಲ್ಲ ಎಂದು ಕಿತ್ತೂರ ಗ್ರಾಮದ ಪ್ಲಾಟ್ ನಿವಾಸಿಗಳು ಗ್ರಾಮ ಪಂಚಾಯತಿಗೆ ಬೇಲಿ ಹಚ್ಚಿ ಪ್ರತಿಭಟನೆ ಮಾಡಿದ ಘಟನೆ ಬುಧವಾರ ನಡೆದಿದೆ.
ಕಳೆದ ಹಲವಾರು ದಿನಗಳಿಂದ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ, ಸದಸ್ಯರಿಗೆ ಹಾಗೂ ಪಿಡಿಓಗೆ ನಮಗಾಗುವ ತೊಂದರೆಗಳ ಕುರಿತು ಮನವಿ ಮಾಡಿಕೊಂಡರು ಅವರು ಕ್ಯಾರೆ ಎನ್ನುತ್ತಿಲ್ಲ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಬೇಲಿ ಹಚ್ಚಿ ಪ್ರತಿಭಟಿಸಿದರು.
ತಮ್ಮ ನಿತ್ಯದ ಕಾರ್ಯ ಕಲಾಪಗಳಿಗೆ ಹೋಗಿ ಬರಲು ಬಹಳ ತೊಂದರೆಯಾಗುತ್ತಿದೆ ಎಂದು ಇದೆ ದಿ:13 ರಂದು ರಾಮದುರ್ಗ ತಹಶಿಲ್ದಾರರಿಗೆ ಮನವಿಯನ್ನು ಸಲ್ಲಿಸಿದರು ಯಾವುದೇ ಪ್ರಯೋಜನೆಯಾಗಿಲ್ಲ. ನಮ್ಮ ಮನೆಗಳಿಗೆ ಸಂಚರಿಸುವ ಹಾದಿಗೆ ಅಲ್ಲಿನ ಜಮೀನುಗಳ ರೈತರು ಬೇಲಿ ಹಚ್ಚಿ ದಾರಿ ಬಂದ್ ಮಾಡಿದ್ದಾರೆ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡರು.
ರಾಷ್ಟ್ರಧ್ವಜವನ್ನು ಯಾಕೆ ಹಾರಿಸಿಲ್ಲಾ ಎಂಬ ಪ್ರಶ್ನೆಗೆ ಕಿತ್ತೂರ ಗ್ರಾಪಂನ ಪಿಡಿಓ ದಾಸಪ್ಪನವರ ಪಂಚಾಯತಿಗೆ ಬೇಲಿಹಚ್ಚಿ ನಮಗೆ ಒಳಗೆ ಹೋಗಲು ಅಲ್ಲಿನ ಜನ ಬಿಟ್ಟಿಲ್ಲ, ಅದಕ್ಕಾಗಿ ಧ್ವಜ ಹಾರಿಸಿಲ್ಲ. ಮಧ್ಯಾಹ್ನ ಧ್ವಜವನ್ನು ಹಾರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ವೇಳೆ ಲಕ್ಷ್ಮಣ ಮಾದರ, ಈರವ್ವ ಅಳಗುಂಡಿ, ಗೌರವ್ವ ರೆವಪ್ಪನವರ, ಮಂಜುನಾಥ ಹದ್ಲಿ, ಸರಸ್ವತಿ ವಾಸನ, ಫಕೀರಪ್ಪ ಬನ್ನೂರ, ನಿಂಗಪ್ಪ ಬೇವೂರ, ರಾಯಪ್ಪ ಚಂದರಗಿ, ಸುನೀಲ ಹದ್ಲಿ, ಚಂದ್ರಶೇಖರ ಬಡಿಗೇರ, ಗಂಗವ್ವ ಬೇವೂರ ಸೇರಿದಂತೆ ಇತ್ತಿತರರು ಇದ್ದರು.