ಅಬುಧಾಬಿ: 2020ರ ಐಪಿಎಲ್ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶ ಮಾಡಲು ಗೆಲುವು ಪಡೆಯಲೇ ಬೇಕಿದ್ದ ಪಂದ್ಯದಲ್ಲಿ ಚೆನ್ನೈ ತಂಡ ಸೋಲುಂಡಿದೆ. ಧೋನಿ ಬಳಗದ ವಿರುದ್ಧ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಲ್ಲೂ ಉತ್ತಮ ಪ್ರದರ್ಶನ ತೋರಿದ ರಾಜಸ್ಥಾನ ರಾಯಲ್ಸ್ ತಂಡ 15 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಭರ್ಜರಿ ಗೆಲುವು ಪಡೆದುಕೊಂಡಿದೆ.
126 ರನ್ ಗಳ ಸುಲಭ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ತಂಡ ಉತ್ತಮ ಆರಂಭವನ್ನು ಪಡೆಯಲಿಲ್ಲ. ತಂಡ 26 ರನ್ ಗಳಿಸುವ ವೇಳೆ 19 ರನ್ ಗಳಿಸಿದ್ದ ಸ್ಟೋಕ್ಸ್ ಚಹರ್ ಗೆ ವಿಕೆಟ್ ಒಪ್ಪಿಸಿದ್ದರು. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಆರ್ಡರ್ ನಲ್ಲಿ ಬಡ್ತಿ ಪಡೆದು ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಉತ್ತಪ್ಪ ಇಂದು ಕೇವಲ 4 ರನ್ ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಕೂಡ ಬಂದಷ್ಟೇ ವೇಗದಲ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದರೊಂದಿಗೆ ರಾಜಸ್ಥಾನ ತಂಡ ಕೇವಲ 28 ರನ್ ಗಳಿಗೆ ಪ್ರಮುಖ 3 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಒಂದಾದ ಸ್ಮಿತ್, ಬಟ್ಲರ್ ಜೋಡಿ 4ನೇ ವಿಕೆಟ್‍ಗೆ ಬರೋಬ್ಬರಿ 98 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಗೆಲುವಿನ ಕಾಣಿಕೆ ತಂದು ಕೊಡಲು ಯಶಸ್ವಿಯಾಗಿತ್ತು. ರಾಜಸ್ಥಾನ ಪರ 48 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 70 ರನ್ ಸಿಡಿಸಿ ಬಟ್ಲರ್ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಬಟ್ಲರ್ ಗೆ ಉತ್ತಮ ಸಾಥ್ ಕೊಟ್ಟ ನಾಯಕ ಸ್ಮಿತ್ 34 ಎಸೆತಗಳಲ್ಲಿ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಚೆನ್ನೈ ಪರ ದೀಪಕ್ ಚಹರ್ 4 ಓವರ್ ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರೇ, ಹಜಲ್‌ವುಡ್ 1 ವಿಕೆಟ್ ಗಳಿಸಿದರು.