ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಭಾಗದ ಹಿರಿಯ ನಾಯಕರು, ಉತ್ತರ ಕರ್ನಾಟಕ ಭಾಗದಲ್ಲಿ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಯಾಗಿದೆ. ಹೀಗಿರುವಾಗ ಪಕ್ಷಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದು ನೋವು ತಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರಿಗೆ ದೊಡ್ಡ ಹುದ್ದೆ ಕೊಡುತ್ತೇವೆ ಎಂದು ಹೇಳಲಾಯಿತು. ದೆಹಲಿ ಮಟ್ಟದಲ್ಲಿ ಹುದ್ದೆ ನೀಡುವುದಾಗಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಭರವಸೆ ನೀಡಿದ್ದರು. ಆದರೂ ಅವರು ರಾಜೀನಾಮೆಗೆ ಮುಂದಾಗಿದ್ದಾರೆ. ಶೆಟ್ಟರ್ ಈ ನಿರ್ಧಾರ ಮಾಡಿರುವುದು ತಪ್ಪು ಎಂದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ಕೆಲ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ತೀರ್ಮಾನಿಸಲಾಗಿದೆ ಎಂದರು. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಿಜೆಪಿ ಹಿಂದೇಟು ಹಾಕಿಲ್ಲ, ಬಿಜೆಪಿಯಿಂದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಅಭಿವೃದ್ಧಿಯಾಗಿದೆ. ಸರ್ವರ ಅಭಿವೃದ್ಧಿಯನ್ನು ಸರ್ಕಾರ ಮಾಡಿದೆ. ಲಿಂಗಾಯಿತ ಸಮುದಾಯವನ್ನು ಸರ್ಕಾರ ಕಡೆಗಣಿಸಿಲ್ಲ. ಸಮುದಾಯದ ಹಲವರು ಸರ್ಕಾರದಲ್ಲಿ ಸಚಿವರು, ಶಾಸಕರಿದ್ದಾರೆ ಎಂದು ತಿಳಿಸಿದರು.