ಅಥಣಿ (ಬೆಳಗಾವಿ ಜಿಲ್ಲೆ): ಪಕ್ಷ ಬಿಡದಂತೆ ಲಕ್ಷ್ಮಣ ಸವದಿ ಅವರ ಮನವೊಲಿಸಲು ಇಲ್ಲಿಗೆ ಗುರುವಾರ ಬಂದಿದ್ದ ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ನೇರ್ಲಿ ಹಾಗೂ ಆರ್.ಎಸ್.ಎಸ್. ಮುಖಂಡರಿಗೆ ಸವದಿ ಬೆಂಬಲಿಗರು ಮುತ್ತಿಗೆ ಹಾಕಿ, ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.
ಮತ್ತೆ ಕೆಲವರು ನೇರ್ಲಿ ಅವರ ಕಾರಿಗೆ ಗುದ್ದಿ ಕಿಡಿ ಕಾರಿದರು. ‘ನಮ್ಮ ಸಾಹುಕಾರಗೆ ಯಾಕೆ ಟಿಕಟ್ ತಪ್ಪಿಸಿದ್ದೀರಿ ಎಂದು ಉತ್ತರ ಕೊಟ್ಟೇ ಹೋಗಬೇಕು’ ಎಂದು ಪಟ್ಟು ಹಿಡಿದರು.
‘ಈ ಜಿಲ್ಲಾಧ್ಯಕ್ಷ ಸಂಧಾನಕ್ಕೆ ಬಂದಿದ್ದಾರೆ. ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾದ ಸವದಿ ಅವರಿಗೆ ಬಿಜೆಪಿ ವರರಿಷ್ಠರು ಬೆಲೆ ಕೊಟ್ಟಿಲ್ಲ. ಇವರು ಯಾವ ಲೆಕ್ಕ’ ಎಂದೂ ಕೆಲವರು ಲೇವಡಿ ಮಾಡಿದರು.
‘ನಾವು, ನಮ್ಮ ಸಾಹುಕಾರು ಸ್ವಂತ ಸಾಮರ್ಥ್ಯದ ಮೇಲೆ ಗೆದ್ದವರು. ಬಿಜೆಪಿ ಉಪಕಾರವೇನೂ ಮಾಡಿಲ್ಲ. ಹಾಗಿದ್ದ ಮೇಲೆ ಬಿಜೆಪಿ ಪರ ನಾವೇಕೆ ಕೆಲಸ ಮಾಡಬೇಕು. ಇನ್ನು ಮುಂದೆ ಕೂಡ ಸವದಿ ಅವರನ್ನು ಹೆಚ್ಚು ಲೀಡ್‌ನಿಂದ ಗೆಲ್ಲಿಸುತ್ತೇವೆ. ಟಿಕೆಟ್ ತಪ್ಪಿಸುವ ಹುನ್ನಾರ ಮಾಡಿದ ನಿಮಂಥವರಿಗೆ ಬುದ್ಧಿ ಕಲಿಸುತ್ತೇವೆ’ ಎಂದು ಕೆಲ ಗ್ರಾಮ ಪಂಚಾಯಿತಿ ಸದಸ್ಯರೂ ಕಿಡಿ ಕಾರಿದರು.
ಜನರ ಆಕ್ರೋಶಕ್ಕೆ ಉತ್ತರ ಕೊಡಲಾಗದೇ ನೇರ್ಲಿ ಕೆಲಹೊತ್ತು ಸುಮ್ಮನೇ ಕುಳಿತರು. ಏನೂ ಪ್ರತಿಕ್ರಿಯಿಸದೇ ಸವದಿ ಅವರ ಮನೆಯಿಂದ ಹೊರಡಲು ಸಿದ್ಧರಾದರು. ಅವರನ್ನು ಹೊರಗೆ ಬಿಡದ ಜನ, ಉತ್ತರ ಕೊಟ್ಟೇ ಹೋಗಬೇಕು ಎಂದು ಎಳೆದಾಡಿದರು.
ಸ್ಥಳದಲ್ಲಿದ್ದ ಲಕ್ಷ್ಮಣ ಸವದಿ ಜನರನ್ನು ಸಮಾಧಾನಪಡಿಸಲು ಯತ್ನಿಸಿದರು. ಗಲಾಟೆ ಹೆಚ್ಚಾಗುವ ಪರಿಸ್ಥಿತಿ ತಲೆದೋರಿಂದ ಸವದಿ ಅವರೇ ನೇರ್ಲಿ ಅವರನ್ನು ಕೈ ಹಿಡಿದುಕೊಂಡು ಬಂದು ಕಾರಿನೊಳಗೆ ಹತ್ತಿಸಿದರು.
ಅಷ್ಟರೊಳಗೆ ಕಾರ್ ಸುತ್ತುವರಿದ ಜನ ಧಿಕ್ಕಾರ ಕೂಗಿದರು. ಅವಾಚ್ಯ ಪದಗಳಿಂದ ನಿಂದಿಸಿದರು. ಕಾರಿನ ಬಾಗಿಲಿಗೆ ಗುದ್ದಿದರು. ಸ್ಥಳಕ್ಕೆ ಬಂದ ಸವದಿ ಅವರ ಪುತ್ರರು ಜನರನ್ನು ಚದುರಿಸಿ ಕಾರಿಗೆ ದಾರಿ ಮಾಡಿಕೊಟ್ಟರು.