ಗೋಕಾಕ: ‘ಸತ್ಯ, ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸದಂತಹ ಗುಣಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡು, ಜೀವನ ಸಾರ್ಥಕವಾಗಿಸಿಕೊಳ್ಳಬೇಕು’ ಎಂದು ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಸಾವಳಗಿಯ ಸಿದ್ಧಸಂಸ್ಥಾನ ಪೀಠದಲ್ಲಿ ಶಿವಲಿಂಗೇಶ್ವರ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಶಿವಲಿಂಗೇಶ್ವರ ಪುರಾಣ ಕಾರ್ಯಕ್ರಮ ಮತ್ತು ಸಾಹಿತ್ಯ, ಸಂಸ್ಕೃತಿ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮನುಷ್ಯ ತನ್ನ ಕರ್ಮ ಮತ್ತು ಅಜ್ಞಾನ ಬಿಟ್ಟು ಸುಜ್ಞಾನದತ್ತ ಸಾಗಬೇಕು. ನುಡಿದಂತೆ ನಡೆಯಬೇಕು. ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಜೀವನದಲ್ಲಿ ಶಾಂತಿ, ನೆಮ್ಮದಿ ಗಳಿಸಬೇಕು’ ಎಂದರು.
ಗದುಗಿನ ವೇದಮೂರ್ತಿ ಚನ್ನವೀರಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಕಿತ್ತೂರ ‘ಭಕ್ತಿ ಗಾಯನ’ ಕಾರ್ಯಕ್ರಮ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಹರತಿ, ರಾಘವೇಂದ್ರ, ಕೃಷ್ಣಾ, ಶಾಮರಾವ ಪುಲಾರೆ ಮತ್ತು ವಿಜಯ ದೊಡ್ಡಣ್ಣವರ ಸಾಥ್ ನೀಡಿದರು