ಬೇಸಿಗೆಯ ಸೆಖೆಯಲ್ಲಿ ತಣ್ಣನೆಯ ಲೆಮನ್ ಸಿರಪ್ ಕುಡಿದರೆ ಮನಸ್ಸು ಪ್ರಶಾಂತವಾಗುತ್ತದೆ. ಆದರೆ ಈಗ ನಿಂಬೆ ಹಣ್ಣಿನ ಬೆಲೆ ಏರಿಕೆಯಿಂದ ನೆಮ್ಮದಿಯೂ ಹೋಗಿದೆ.
ಹೌದು, ಬಾಗಲಕೋಟೆ, ವಿಜಯಪುರದಲ್ಲಿ ಈಗ ನಿಂಬೆಹಣ್ಣು ಉತ್ಪಾದನೆ ಕಡಿಮೆ ಆಗಿದೆ. ಇದರಿಂದ ಬೆಳಗಾವಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ಬೆಲೆ ಜನಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ನಿಂಬೆ ಹಣ್ಣಿಗೆ 10 ರೂಪಾಯಿ ಇದೆ. ಇದರಿಂದ ಬೇಸಿಗೆಯಲ್ಲಿ ತಂಪು ನಿಂಬೆ ಪಾನಕವೂ ದುಬಾರಿಯಾಗಿದೆ.
ಈ ನಿಟ್ಟಿನಲ್ಲಿ ನಿಂಬೆ ಹಣ್ಣಿನ ಮಾರಾಟಗಾರ ವೆಂಕಟೇಶ ಸೋನಾರ್ ಮಾತನಾಡಿ, ಬೇಸಿಗೆಯಿಂದಾಗಿ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚುತ್ತಿದ್ದರೂ ನಿಂಬೆ ಬೆಲೆ ಏರಿಕೆಯಿಂದ ಒಂದು ನಿಂಬೆ ಹಣ್ಣಿಗೆ ಹತ್ತು ರೂಪಾಯಿ ಇದೆ. 50 ರೂಪಾಯಿಗೆ ಆರು ನಿಂಬೆಹಣ್ಣು ಕೊಡುತ್ತಿದ್ದೇವೆ. ಹೋಟೆಲ್ ಗಳ ಜತೆಗೆ ತಂಪು ಪಾನೀಯ ಅಂಗಡಿಗಳಿಂದಲೂ ಲಿಂಬೆಗೆ ಬೇಡಿಕೆ ಹೆಚ್ಚಿದೆ.
50 ರೂ.ಗೆ 5ರಿಂದ 6 ನಿಂಬೆಹಣ್ಣು ದರವಿದೆ ಎನ್ನುತ್ತಾರೆ ಮತ್ತೊಬ್ಬ ಮಾರಾಟಗಾರ ಗುಲಾಂ ರಸೂಲ್. 20 ರೂಪಾಯಿಗೆ 3ರಿಂದ 4 ಮಧ್ಯಮ ಗಾತ್ರದ ನಿಂಬೆಹಣ್ಣು ನೀಡುತ್ತಿದ್ದೇವೆ. ಬಿಜಾಪುರ, ಬಾಗಲಕೋಟೆ ಮುಂತಾದ ಕಡೆ ನಿಂಬೆ ಹಣ್ಣಿನ ಉತ್ಪಾದನೆ ಕಡಿಮೆಯಾಗಿದ್ದು, ಆಗಮನವೂ ಕುಂಠಿತವಾಗಿದೆ. ಇದರಿಂದ ಬೆಳಗಾವಿ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ಬೆಲೆ ಹೆಚ್ಚಾಗಿದೆ ಎಂದರು.