ಬೆಂಗಳೂರು : ಚೇತನ್ ಅಹಿಂಸಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಮುನ್ನೆಲೆಗೆ ಬಂದೇ ಬರುತ್ತಾರೆ. ಅದರಲ್ಲೂ ಅವರು ಮಾಡುವ ಟ್ವೀಟ್‌ಗಳು ಸೆನ್ಸೇಷನ್ ಹುಟ್ಟು ಹಾಕುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಚೇತನ್, ಇದೀಗ ಕಿಚ್ಚ ಸುದೀಪ್ ಬಿಜೆಪಿಗೆ ಬೆಂಬಲ ನೀಡಿದ್ದರ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ.
ಸುದೀಪ್ ಬಿಜೆಪಿ ಸೇರಲಿದ್ದಾರೆ, ಚುನಾವಣೆಗೂ ಸ್ಪರ್ಧಿಸಲಿದ್ದಾರೆ ಎಂಬ ಅನೇಕ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದವು. ಇದೆಲ್ಲದಕ್ಕೂ ಇಂದು ಸುದೀಪ್ ಸ್ಪಷ್ಟನೆ ಕೊಟ್ಟಾಗಿದೆ. ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಆದರೆ ತನ್ನ ಆಪ್ತರಾದ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತೇನೆ, ಅವರು ಹೇಳಿದವರ ಪರ ಪ್ರಚಾರ ಮಾಡುವೆ ಎಂದು ತಿಳಿಸಿದ್ದಾರೆ.
“ಸಿನಿಮಾ ತಾರೆ ಬಿಜೆಪಿ ಸೇರ್ಪಡೆಯಾದರೆ ಉದಾರವಾದಿಗಳು ಅದನ್ನು ಮಾರಾಟ ಎನ್ನುವುದು ಏಕೆ? ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್/ಜೆಡಿಎಸ್/ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ ಮಾರಾಟವಾಗಿದ್ದಾರೆ. ನೆನಪಿಡಿ, ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಸಹ ನಮ್ಮ ಶತ್ರುಗಳೇ. ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕಿದೆ” ಎಂದು ಚೇತನ್ ಅಹಿಂಸಾ ಬರೆದಿದ್ದಾರೆ.