ಬೆಳಗಾವಿ: ‘ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡುವಾಗ, ಎರಡೂ ರಾಷ್ಟ್ರೀಯ ಪಕ್ಷಗಳು ಲಿಂಗಾಯತ ಸಮುದಾಯಕ್ಕೆ ಆದ್ಯತೆ ಕೊಡಬೇಕು. ಇಲ್ಲದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಎಚ್ಚರಿಕೆ ಕೊಟ್ಟರು.
ಇಲ್ಲಿನ ಶಿವಬಸವ ನಗರದ ನಾಗನೂರು ರುದ್ರಾಕ್ಷಿಮಠದಲ್ಲಿ ಸೋಮವಾರ ನಡೆದ ಲಿಂಗಾಯತ ಸಂಘಟನೆಗಳ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಎರಡು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ನವರು ಟಿಕೆಟ್ ನೀಡುವಾಗ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ.
ಈ ಬಾರಿ ನಮ್ಮ ಸಮುದಾಯದವರಿಗೆ ಟಿಕೆಟ್ ಕೊಟ್ಟರೆ, ಲಿಂಗಾಯತ ಹಾಗೂ ಬಸವ ಸಂಘಟನೆಯವರೆಲ್ಲ ಸೇರಿಕೊಂಡು ಒಗ್ಗಟ್ಟಿನಿಂದ ಗೆಲ್ಲಿಸಲು ಪ್ರಯತ್ನಿಸುತ್ತೇವೆ ಎಂದರು.
ಲಿಂಗಾಯತ ಸಮುದಾಯದ ಮುಖಂಡ ಶಂಕರ ಗುಡಸ್, ‘ಈ ಹಿಂದೆ ನಡೆದ ವಿಧಾನಸಭೆ ಚುನಾವಣೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ತಾರತಮ್ಯವಾದರೆ ಇದನ್ನು ಸಹಿಸಿಕೊಳ್ಳುವುದಿಲ್ಲ. ಸಮುದಾಯದ ಹಿರಿಯರೆಲ್ಲ ಮತ್ತೊಂದು ಹಂತದ ಸಭೆ ನಡೆಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ‘ಈಗ ಎರಡೂ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳ ಘೋಷಣೆ ಮಾಡುತ್ತಿವೆ. ಆ ವೇಳೆ, ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಮಣೆ ಹಾಕಬೇಕು’ ಎಂದು ಒತ್ತಾಯಿಸಿದರು.
ಸುಜೀತ ಮುಳಗುಂದ, ಅಶೋಕ ಮಳಗಲಿ ಇತರರಿದ್ದರು.