ಬೆಳಗಾವಿ: ಈ ಬಾರಿಯೂ ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಸುತ್ತೇನೆ. ಚುನಾವಣಾ ಪ್ರಚಾರದ ವಾಹನಕ್ಕೆ ಶ್ಮಶಾನದಿಂದಲೇ ಚಾಲನೆ ನೀಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎ.13ರಿಂದ 20ರ ಮಧ್ಯೆ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸುತ್ತೇನೆ.
ಇದು ಕೆಟ್ಟದ್ದು ಅಂತ ಯಾರು ಹೇಳುತ್ತಾರೆ. ಇದು ನಮ್ಮ ವಿಚಾರ. ಕಳೆದ ಮೂವತ್ತು ವರ್ಷಗಳಿಂದ ಬಸವಣ್ಣನವರು, ಡಾ|ಬಾಬಾಸಾಹೇಬ ಅಂಬೇಡ್ಕರ್, ಬುದ್ಧ ತೋರಿಸಿದ ದಾರಿಯಲ್ಲಿ ನಡೆಯುತ್ತಿದ್ದೇವೆ. ಮೊದಲಿನಿಂದಲೂ ಈ ಸತ್ಯದ ದಾರಿಯಲ್ಲಿ ನಡೆದಿದ್ದೇವೆ. ರಾಹುಕಾಲ, ಒಳ್ಳೆಯ ಕಾಲ ಎಂಬುದು ನಮ್ಮ ಭ್ರಮೆ ಅಷ್ಟೇ ಎಂದರು.
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಈಗಾಗಲೇ ಬಿಡುಗಡೆಗೊಳಿಸಿದ್ದು, 2ನೇ ಪಟ್ಟಿಯನ್ನು ಎ .10ರೊಳಗೆ ಬಿಡುಗಡೆಗೊಳಿಸಲಾಗುವುದು ಎಂದರು.