ಗೋಕಾಕ : ಕೆಎಂಎಫ್ ರೈತರ ಬೃಹತ್ ಸಂಸ್ಥೆಯಾಗಿದ್ದು ರೈತರ ಶ್ರೇಯೋಭಿವೃದ್ಧಿಗೆ ಮತ್ತು ಅವರ ಆರ್ಥಿಕ ಬಲವರ್ಧನೆಗಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇತ್ತೀಚೆಗೆ ಇಲ್ಲಿನ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಜಿಲ್ಲಾ ಹಾಲು ಒಕ್ಕೂಟದಿಂದ ಒಟ್ಟು ೮.೬೦ ಲಕ್ಷ ರೂ.ಗಳ ಚೆಕ್‌ಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ರೈತರು ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ ಹಾಲು ಉತ್ಪಾದಕರ ಸಂಘಗಳು ಬೆಳೆಯುತ್ತವೆ ಎಂದು ಹೇಳಿದರು.
ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಕಲ್ಯಾಣ ಸಂಘಗಳ ೪೧ ಸದಸ್ಯರಿಗೆ ತಲಾ ೧೦ ಸಾವಿರ ರೂ.ಗಳಂತೆ ೪.೧೦ ಲಕ್ಷ ರೂ.ಗಳು, ಜಿಲ್ಲಾ ಹಾಲು ಒಕ್ಕೂಟದಿಂದ ರಡ್ಡೇರಹಟ್ಟಿ ಹಾಲು ಉತ್ಪಾದಕರ ಸಂಘಕ್ಕೆ ೨ ಲಕ್ಷ ರೂ. ಮತ್ತು ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ೧ ಲಕ್ಷ ರೂ, ರಾಸು ವಿಮೆ ಸದಸ್ಯರಿಗೆ ತಲಾ ೫೦ ಸಾವಿರ ರೂ.ಗಳಂತೆ ಒಟ್ಟು ೧.೫೦ ಲಕ್ಷ ರೂ.ಗಳ ಚೆಕ್‌ಗಳನ್ನು ಅವರು ವಿತರಿಸಿದರು.
ದಕ್ಷಿಣ ಕರ್ನಾಟಕದ ಮಾದರಿಯಂತೆ ನಮ್ಮ ಉತ್ತರ ಕರ್ನಾಟಕದ ಕೃಷಿ ಮಿತ್ರರು ಕೇವಲ ಕಬ್ಬಿನ ಬೆಳೆ ಮಾಡದೇ ಹೈನುಗಾರಿಕೆಯನ್ನು ಉತ್ತೇಜಿಸುವ ಕೆಲಸ ಮಾಡಬೇಕು. ಇದರಿಂದ ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲಪ್ಪ ಪಾಟೀಲ, ಮುತ್ತೆಪ್ಪ ಖಾನಪ್ಪಗೋಳ, ಗೋಕಾಕ ಉಪಕೇಂದ್ರದ ಅಧಿಕಾರಿ ಎಸ್.ಬಿ. ಕರಬನ್ನವರ, ಮೂಡಲಗಿ ಉಪಕೇಂದ್ರದ ಅಧಿಕಾರಿ ರವಿ ತಳವಾರ, ವಿಸ್ತರಣಾಧಿಕಾರಿಗಳಾದ ವಿಠ್ಠಲ ಲೋಕುರಿ, ಸಚೀನ ಪಡದಲ್ಲಿ, ಬಿ.ಎಸ್. ಖಿಲಾರಿ, ಸುರೇಶ ಪಾಟೀಲ, ಪಶು ವೈದ್ಯಾಧಿಕಾರಿ ಡಾ.ವೀರಣ್ಣಾ ಕೌಜಲಗಿ ಅವರು ಉಪಸ್ಥಿತರಿದ್ದರು.