ಬೆಳಗಾವಿ : ಬಿಜೆಪಿಯ ಟಿಕೆಟ್ ಘೋಷಣೆ ದಿನಾಂಕ ಮುಂದಕ್ಕೆ ಹೋಗಿರುವುದರಿಂದ ನನ್ನ ನಿರ್ಧಾರ ತೆಗೆದುಕೊಳ್ಳುವ ದಿನವನ್ನು ಮುಂದೂಡಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಮಾರ್ಚ್ 27ರೊಳಗೆ ಎಲ್ಲ ಸಮುದಾಯದ ನಾಯಕರ ಜೊತೆ ಚರ್ಚಿಸಿ, 27ರಂದು ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಲಕ್ಷ್ಮಣ ಸವದಿ ಈ ಮೊದಲು ತಿಳಿಸಿದ್ದರು. ಆದರೆ ಬಿಜೆಪಿಯ ಟಿಕೆಟ್ ಘೋಷಣೆ ಸಮಯ ಮುಂದಕ್ಕೆ ಹೋಗಿದೆ. ಹಾಗಾಗಿ ನಾನು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು.
ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಬೇಕೋ ಬೇಡವೋ ಎನ್ನುವ ಕುರಿತು ಎಲ್ಲ ಸಮುದಾಯಗಳ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ನಾನು ಹೇಳಿದ್ದೆ. ಅದನ್ನು ಬಿಟ್ಟು ಬೇರೆ ಯಾವುದೇ ಯೋಚನೆ ನನಗಿಲ್ಲ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಪ್ರಕಟಿಸುತ್ತೇನೆ ಎಂದು ಅವರು ಪ್ರಗತಿವಾಹಿನಿಗೆ ತಿಳಿಸಿದರು.
ಅಥಣಿ ಕ್ಷೇತ್ರಕ್ಕೆ ಮಹೇಶ ಕುಮಟಳ್ಳಿಗೆ ಟಿಕೆಟ್ ನೀಡಬೇಕೆಂದು ರಮೇಶ ಜಾರಕಿಹೊಳಿ ಪಟ್ಟು ಹಿಡಿದಿರುವುದರಿಂದ ಲಕ್ಷ್ಮಣ ಸವದಿಯವರ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ. ಚುನಾವಣೆಗೆ ಸ್ಪರ್ಧಿಸಲೇಬೇಕೆಂದು ಲಕ್ಷ್ಮಣ ಸವದಿ ನಿರ್ಧರಿಸಿದರೆ ಜಿಲ್ಲೆಯಷ್ಟೇ ಅಲ್ಲ, ರಾಜ್ಯ ರಾಜಕಾರಣದಲ್ಲೂ ಬಿಜೆಪಿಯಲ್ಲಿ ದೊಡ್ಡ ಗೊಂದಲ ಸೃಷ್ಟಿಯಾಗಲಿದೆ.
 Laxmi News 24×7
Laxmi News 24×7
				 
		 
						
					 
						
					 
						
					