ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಸಮೀಪದ ಇಂಚಲ ಗ್ರಾಮದಲ್ಲಿ ಸೋಮವಾರ ಬೆಂಕಿ ತಗುಲಿ 20 ಕಣಕಿ ಬಣವಿಗಳು ಭಸ್ಮವಾಗಿವೆ. ಒಂದು ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರೋಪಕರಣಗಳು ಸುಟ್ಟಿವೆ. ಇದರಿಂದ ₹ 1 ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಬಿಳಿಜೋಳ, ಗೋವಿನ ಜೋಳ ಮತ್ತಿತರ ಬೆಳೆಗಳ ರಾಶಿ ಮುಗಿಸಿದ ರೈತರು ಗ್ರಾಮದ ಹೊರವಲಯದಲ್ಲಿ ಒಂದೇ ಕಡೆ ಬಣವಿ ಒಟ್ಟಿದ್ದರು. ಸೋಮವಾರ ಮಧ್ಯಾಹ್ನ ಒಂದು ಬಣವಿಗೆ ಬೆಂಕಿ ಹೊತ್ತಿಕೊಂಡಿತು. ಜನ ಅದನ್ನು ತಡವಾಗಿ ಗಮನಿಸಿದ್ದರಿಂದ ಉಳಿದ ಬಣವಿಗಳಿಗೂ ವ್ಯಾಪಿಸಿತು. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಗೊತ್ತಾಗಿಲ್ಲ.
ಬೆಳಗಾವಿ, ಗೋಕಾಕ, ಸವದತ್ತಿ, ಬೈಲಹೊಂಗಲ ಅಗ್ನಿ ಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರು. ಅಷ್ಟರೊಳಗೆ ಬಣವಿಗಳು ಪೂರ್ಣ ಸುಟ್ಟುಹೋದವು. ಪಕ್ಕದ ಮನೆಗಳಿಗೆ ಬೆಂಕಿ ತಾಗದಂತೆ ಸಿಬ್ಬಂದಿ ಎಚ್ಚರಿಕೆ ವಹಿಸಿದರು.
ಬಣವಿಗಳ ಬಳಿಯೇ ನಾಲ್ಕು ಎತ್ತುಗಳನ್ನು ಕಟ್ಟಲಾಗಿತ್ತು. ಬೆಂಕಿ ಬಿದ್ದಿದ್ದನ್ನು ಗಮನಿಸಿದ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು, ಸ್ಥಳಕ್ಕೆ ಧಾವಿಸಿ ಎತ್ತುಗಳ ಹಗ್ಗ ಬಿಚ್ಚಿ ದೂರ ಓಡಿಸಿದರು. ವಿದ್ಯಾರ್ಥಿಗಳ ಪ್ರಜ್ಞೆಯಿಂದ ಎತ್ತುಗಳ ಪ್ರಾಣ ಉಳಿಯಿತು. ಆರು ತಾಸು ಕಾರ್ಯಾಚರಣೆಯ ಬಳಿಕ ಬೆಂಕಿ ಹತೋಟಿಗೆ ಬಂದಿತು ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.
Laxmi News 24×7