ಮೈಸೂರು : ಶನಿವಾರ ಹುಣಸೂರು ಬಳಿ ಅಥಣಿ ತಾಲೂಕಿನ ಐಗಳಿ ಮೂಲದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪತಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ.
ಈ ಕುರಿತು ಮೈಸೂರಿನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಗತಿವಾಹಿನಿ ಜೊತೆ ಮಾತನಾಡಿ, ಪ್ರಕರಣ ತನಿಖೆಯ ಹಂತದಲ್ಲಿದೆ. ಈವರೆಗೆ ಯಾರನ್ನೂ ಅಧಿಕೃತವಾಗಿ ಬಂಧಿಸಿಲ್ಲ. ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಯುವತಿಯ ಮೊಬೈಲ್ ನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆ ಸಾವಿಗೂ ಮುನ್ನ ಜೋರಾಗಿ ಮಾತನಾಡಿರುವುದು ಯಾರೊಂದಿಗೆ ಎನ್ನುವುದನ್ನು ಪತ್ತೆ ಮಾಡಿ, ತನಿಖೆ ನಡೆಸುತ್ತಿದ್ದಾರೆ.
ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಮೂಲದ ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರಿನ ಬಿಳಿಕೆರೆ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿ ಕೃಷ್ಣಾಭಾಯಿ ತುಕಾರಾಮ ಪಡ್ಕೆ (25) ಆತ್ಮಹತ್ಯೆಗೆ ಶರಣಾದವರು. ಅವರ ಮೃತದೇಹ ಅವರು ವಾಸವಿದ್ದ ಬಾಡಿಗೆ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಬಿಳಿಕೆರೆಯ ಎಸ್.ಬಿ.ಐ ಹಿಂದೆ ಬಾಡಿಗೆ ಮನೆಯೊಂದರಲ್ಲಿ ಚೈತ್ರಾ ಮತ್ತು ಅವರ ತಾಯಿ ಜೊತೆ ಅವರು ವಾಸವಾಗಿದ್ದರು. ಹನೂರಿನಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಬೆಳಗಾವಿ ಮೂಲದ ಸುಭಾಷ್ ಬೋಸ್ಲೆ ಎಂಬುವವರನ್ನು ಒಂದು ತಿಂಗಳ ಹಿಂದಷ್ಟೇ ಕೃಷ್ಣಾಬಾಯಿ ವಿವಾಹವಾಗಿದ್ದರು. ರಜೆಯ ನಂತರ 4 ದಿನಗಳ ಹಿಂದೆ ಕೆಲಸಕ್ಕೆ ಹಾಜರಾಗಿದ್ದರು.
ಶನಿವಾರ ಬೆಳಗ್ಗೆ ಯಾರೊಂದಿಗೋ ಜೋರಾಗಿ ಫೋನ್ ನಲ್ಲಿ ಮಾತಾಡಿದ ನಂತರ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಹಾಕಿಕೊಂಡಿದ್ದಾರೆ. ಎಷ್ಟೇ ಕರೆದರೂ ಮಾತನಾಡದಿದ್ದಾಗ ಅಕ್ಕಪಕ್ಕದವರ ನೆರವಿನಿಂದ ಬಾಗಿಲು ಒಡೆದು ನೋಡಿದಾಗ ಕೊಠಡಿಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕೃಷ್ಣಾಭಾಯಿ ಶವ ಪತ್ತೆಯಾಗಿತ್ತು.
ಬಿಳಿಕೆರೆ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ.
Laxmi News 24×7