ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅರಕಲಗೂಡು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಾಜಿ ಸಚಿವ ಎ. ಮಂಜು ದಿಢೀರ್ ಕಾರ್ಯಕರ್ತರ ಸಭೆ ಕರೆದಿದ್ದು, ಇನ್ನು ಮುಂದೆ ಎಲ್ಲರು ಜೆಡಿಎಸ್ ಪರ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಅರಕಲಗೂಡು ತಾಲೂಕಿನ ಹಣ್ಯಾಳು ಗ್ರಾಮದಲ್ಲಿ ಸಭೆ ಕರೆದು ಪ್ರತಿಜ್ಞೆ ಮಾಡಿಸಿದ್ದಾರೆ. ಇನ್ನು ಮುಂದೆ ನಾವೆಲ್ಲರು ಜೆಡಿಎಸ್ನವರು, ಜೆಡಿಎಸ್ ಪಕ್ಷದಿಂದ ಎ.ಮಂಜು ಅವರನ್ನು ಗೆಲ್ಲಿಸಬೇಕು ಎಂದು ಪ್ರತಿಜ್ಞೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಎ.ಮಂಜು ಅಭಿಮಾನಿಗಳು ಕೈ ಎತ್ತಿ ಘೋಷಣೆ ಕೂಗುವ ಮೂಲಕ ಪ್ರತಿಜ್ಞೆ ಮಾಡಿದರು.
ಅರಕಲಗೂಡು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎ.ಮಂಜು ಸ್ಪರ್ಧೆ ಮಾಡುವುದು ಫಿಕ್ಸ್ ಆಗಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಎ. ಮಂಜು ಭೇಟಿ ಮಾಡಿ ಬಂದಿದ್ದಾರೆ. ಎಚ್.ಡಿ. ರೇವಣ್ಣ, ಎಚ್ಡಿಕೆ ಹಾಗೂ ಎಚ್ಡಿಡಿ ಜೊತೆ ಮಂಜು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರಕಲಗೂಡು ಶಾಸಕ ರಾಮಸ್ವಾಮಿ ಈಗಾಗಲೇ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎ. ಮಂಜು ಅವರನ್ನು ಜೆಡಿಎಸ್ ಕಣಕ್ಕಿಳಿಸುತ್ತಿದೆ. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ ಮತ್ತು ಮಿತ್ರರಲ್ಲ ಎಂಬ ಮಾತಿಗೆ ಎ. ಮಂಜು ಅವರ ಜೆಡಿಎಸ್ ಸೇರ್ಪಡೆ ಪೂರಕವಾಗಿದೆ. ಎಣ್ಣೆ ಸೀಗೆಕಾಯಿಯಂತಿದ್ದ ಜೆಡಿಎಸ್ ಮತ್ತು ಎ. ಮಂಜು ಇದೀಗ ಒಟ್ಟಿಗೆ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಮಂಜು ಅವರು ಸದಾ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.