ತುಮಕೂರು: ಇಂದು ಈ ಡಾಕ್ಟರ್ ಬಳಿಗೆ ಯಾರಾದರೂ ಹಲ್ಲು ನೋವೆಂದು ಹೋದರೆ ಹಲ್ಲು ಮುರಿದು ಕಳಿಸಿದರೂ ಅಚ್ಚರಿ ಇಲ್ಲ. ಏಕೆಂದರೆ ಈ ಸರ್ಕಾರಿ ವೈದ್ಯ ಪಾನಮತ್ತನಾಗಿ ಆಸ್ಪತ್ರೆಗೆ ಬಂದಿದ್ದು, ಮದ್ಯದ ಅಮಲಿನಲ್ಲಿ ಟೇಬಲ್ ಮೇಲೆ ಕಾಲೆತ್ತಿ ಕುಳಿತು ಅವಾಂತರ ನಡೆಸಿದ್ದಾನೆ.
ತುಮಕೂರು ಜಿಲ್ಲೆಯ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ದಂತ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಜಯಪ್ರಕಾಶ್ ಈ ವರ್ತನೆ ತೋರಿದ್ದಾನೆ. ವೈದ್ಯನ ಅವಾಂತರದ ದೃಶ್ಯಾವಳಿ ಸಾರ್ವಜನಿಕರ ಮೊಬೈಲ್ಫೋನ್ನಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಲಾರಂಭಿಸಿದೆ.
ಪಾನಮತ್ತನಾಗಿ ಆಸ್ಪತ್ರೆಗೆ ಬಂದ ಈತ ಆಸ್ಪತ್ರೆಯ ಟೇಬಲ್ ಮೇಲೆ ಕಾಲೆತ್ತಿಟ್ಟು ಕೂತು ಉದ್ಧಟತನ ತೋರಿದ್ದಾನೆ. ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಈತನಿಂದಾಗಿ ಸಾರ್ವಜನಿಕರು ಅನನುಕೂಲ ಎದುರಿಸಬೇಕಾಗಿ ಬಂದಿತ್ತು. ಚಿಕಿತ್ಸೆಗಾಗಿ ಬಂದಿದ್ದ ಜನರು ಹಾಗೇ ವಾಪಸ್ ಹೋಗಿದ್ದೂ ಕಂಡುಬಂದಿತು.