ಶಿವಮೊಗ್ಗ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಲಂಚ ಪ್ರಕರಣ ಮತ್ತು ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಬಿಜೆಪಿ ಈವರೆಗೆ ಬ್ಯುಸಿನೆಸ್ (ವ್ಯವಹಾರ) ಜನತಾ ಪಕ್ಷವಾಗಿತ್ತು. ಈಗ ಭ್ರಷ್ಟ ಜನತಾ ಪಕ್ಷ ಎಂದು ಸಾಬೀತಾಗಿದೆ. ‘ನಾನು ತಿನ್ನುವುದಿಲ್ಲ; ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದರು. ಆದರೆ, ಬಿಜೆಪಿಯ ಶಾಸಕರ ಪುತ್ರ ಕಂತೆ ಕಂತೆ ಲಂಚದ ಹಣದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಬಿಜೆಪಿ ಭ್ರಷ್ಟಾಚಾರಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಸಿಗದು ಎಂದು ಮಧು ಬಂಗಾರಪ್ಪ ಟೀಕಿಸಿದರು.
‘ಪ್ರತಿ ಕ್ಷೇತ್ರದಲ್ಲೂ ಮತದಾರರಿಗೆ ಆಮಿಷವೊಡ್ಡಲು ಲೂಟಿ ಹಣವನ್ನು ಶೇಖರಿಸಿ ಇಡಲಾಗಿದೆ. ಮಾಡಾಳ್ ಪುತ್ರನ ಮನೆಯಲ್ಲಿ ಹಣ ಸಿಕ್ಕಿಬಿದ್ದಿದ್ದು ಉದಾಹರಣೆಯಷ್ಟೇ. ಕರ್ನಾಟಕದಲ್ಲಿ ಬಿಜೆಪಿಯ ಬಣ್ಣ ಬಯಲಾಗಿದೆ. ಇನ್ನು 10 ದಿನಗಳಷ್ಟೇ ಬಿಜೆಪಿಯ ಮುಖ್ಯಮಂತ್ರಿ ಇರುತ್ತಾರೆ’ ಎಂದರು.
ಬಿಜೆಪಿಯವರಿಗೆ ನೈತಿಕತೆ ಇದ್ದರೆ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಲಿ., ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದರು. ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಸೇರಿ ಹಲವರು ಪ್ರತಿಭಟನೆಯಲ್ಲಿ
ಭಾಗವಹಿಸಿದ್ದರು.