ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆಯ ಮೇರೆಗೆ, ಜಿಲ್ಲೆಯ ವಿವಿಧೆಡೆ ಪಂಚಮಸಾಲಿ ಸಮುದಾಯುದವರು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಇದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ರೇಬಾಗೇವಾಡಿ ವರದಿ: ಹಿಇಲ್ಲಿನ ಟೋಲ್ ಬಳಿ ಶನಿವಾರ ಅರ್ಧ ತಾಸು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
‘ಮುಖ್ಯಮಂತ್ರಿ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವುದಾಗಿ ಸುಳ್ಳು ಹೇಳಿದ್ದಾರೆ. ಪ್ರಮಾಣ ಮಾಡಿ ವಚನ ಭ್ರಷ್ಟರಾಗಿದ್ದಾರೆ’ ಎಂದು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಮುಖಂಡರಾದ ಅಡಿವೇಶ ಇಟಗಿ, ರೋಹಿಣಿ ಪಾಟೀಲ, ಸುರೇಶ ಇಟಗಿ, ರಾಮನಗೌಡ ಪಾಟೀಲ, ಸಂಗಮೇಶ ವಾಲಿ, ಡಿ.ಆರ್.ಪಾಟೀಲ, ಶ್ರೀಶೈಲ ಬೋಳಣ್ಣವರ, ಪ್ರಕಾಶಗೌಡ ಪಾಟೀಲ, ರವಿ ಪಾಟೀಲ, ಶ್ರೀಕಾಂತ ಮಾದುಬರಮನ್ನವರ, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಕಿರಣ ಮೂಲಿನಮನಿ, ದೇಮಣ್ಣ ಮುತ್ನಾಳ, ಸಿದ್ದು ಹಾವಣ್ಣವರ, ರವಿ ಮೆಳೇದ, ಜಗದೀಶ ಯಳ್ಳೂರ ಇದ್ದರು.
ಯಮಕನಮರಡಿ ವರದಿ: ಸಮೀಪದ ಹತ್ತರಗಿ ರಾಷ್ಟ್ರೀಯ ಹೆದ್ದಾರಿ 4ರ ಟೋಲ್ ಪ್ಲಾಜಾ ಬಳಿ ಹುಕ್ಕೇರಿ, ಯಮಕನಮರಡಿ, ಚಿಕ್ಕೋಡಿ, ನಿಪ್ಪಾಣಿ, ರಾಯಭಾಗದ ಪಂಚಮಸಾಲಿ ಲಿಂಗಾಯತ ಸಮಾಜದವರು ಅರ್ಧ ತಾಸು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಶಶಿಕಾಂತ ನಾಯಿಕ, ‘ಕಳೆದ ಎರಡು ವರ್ಷದಿಂದ ಪಂಚಮಶಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಅನೇಕ ಬಾರಿ ಮನವಿಯನ್ನು ನೀಡಲಾಗಿದ್ದರೂ ಬೇಡಿಕೆ ಈಡೇರಿಲ್ಲ. ಮೀಸಲಾತಿ ಸಿಗದಿದ್ದರೆ ಬರುವ ಚುನವಾಣೆಯಲ್ಲಿ ತಕ್ಕಪಾಠ ಕಲಿಸುತ್ತೇವೆ’ ಎಂದರು.
ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಆರ್.ಕೆ.ಪಾಟೀಲ, ರವಿ ಜಿಂಡ್ರಾಳಿ, ಈರಣ್ಣ ಕುಡಚಿ, ಮಹಾದೇವ ಮಜತಿ, ಮಲ್ಲಪ್ಪಾ ಶಿಳ್ಳಿ, ಪ್ರಕಾಶ ನಗಾರಿ, ಪ್ರಕಾಶ ಬಿಸಿರೊಟ್ಟಿ, ಶಿವಾನಂದ ಚೌಗಲಾ, ಅಶೋಕ ಚೌಗಲಾ, ಮಹಾಂತೇಶ ಮಗದುಮ್ಮ, ವಿನಯ ಪಾಟೀಲ, ಅಜಪ್ಪ ಹೆಬ್ಬಾಳಿ, ವಿ.ಬಿ.ಬಿಸಿರೊಟ್ಟಿ, ಎಂ. ಓಬ್ಬನವರ, ಶ್ರೀಶೈಲ್ ಸಾರಾಪೂರಿ ಮತ್ತು ಸಮಾಜದ ನೂರಾರು ಜನ ಇದ್ದರು.
ಯಾದವಾಡ: ಯಾದವಾಡ- ಸಂಗನಕೇರಿ ಮುಖ್ಯ ರಸ್ತೆಯಲ್ಲಿ (ಕಲ್ಲಕಣವಿ ತಿಗಡಿ) ಒಂದು ತಾಸು ಧರಣಿ ಮಾಡಿದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.
ಮೂಡಲಗಿ ತಾಲ್ಲೂಕಿನ ಅವರಾದಿ, ಅರಳಿಮಟ್ಟಿ ಕುಲಗೋಡ, ತಿಗಡಿ, ತಳಕಟ್ನಾಳ ಬೀಸನಕೊಪ್ಪ, ಉದಗಟ್ಟಿ, ಸುಣಧೋಳಿ, ಮಸಗುಪ್ಪಿ ಗ್ರಾಮದ ಮುಖಂಡರು, ರಮೇಶ ಕೌಜಲಗಿ, ಪ್ರಕಾಶ ಕಾಳಶೆಟ್ಟಿ, ಸಂಜು ಬಾಗೇವಾಡಿ, ಲಿಂಗರಾಜ ಅಂಗಡಿ, ಈರಣ್ಣ ಸಸಾಲಟ್ಟಿ, ಪ್ರಕಾಶ ದೇರೂರ್, ಹನುಮಂತ ರೆಡ್ಡೇರಟ್ಟಿ, ರಮೇಶ ಜಗದಾಳ, ಈರಣ್ಣ ನೇಸರಗಿ ಇತರರು ಇದ್ದರು.
ರಾಜ್ಯ ಹೆದ್ದಾರಿ ತಡೆದು ಆಕ್ರೋಶ
ಅಥಣಿ: ‘2ಎ ಮೀಸಲಾತಿ ಸಂಬಂಧ 6 ಬಾರಿ ಭರವಸೆ ನೀಡಿದ ಸರ್ಕಾರ ಕೊನೆಗೂ ಮೋಸ ಮಾಡಿದೆ. ಮಾತು ತಪ್ಪಿದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಹಿರಿಯ ಮುಖಂಡ ರಮೇಶಗೌಡ ಪಾಟೀಲ ಆಕ್ರೋಶ ವ್ಯಕ್ತಡಿಸಿದರು.
ಪಟ್ಟಣದಲ್ಲಿ ಪಾದಯಾತ್ರೆ ಹಾಗೂ ಜೇವರ್ಗಿ- ಸಂಕೇಶ್ವರ ರಾಜ್ಯ ಹೆದ್ದಾರಿ ತಡೆಯಲ್ಲಿ ಮಾತನಾಡಿದ ಅವರು, ‘ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಿ 50 ದಿನ ಕಳೆದಿದೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದರು.
ಮುಖಂಡರಾದ ಶಶಿಕಾಂತ ಪಡಸಲಗಿ, ಗಜಾನನ ಮಂಗಸೂಳಿ, ಡಿ.ಬಿ. ಠಕ್ಕಣ್ಣವರ ಅಶೋಕ ಜಗದೇವ, ಸಮಾಜದ ಅಧ್ಯಕ್ಷ ಅವಿನಾಶ ನಾಯಿಕ ಮಾತನಾಡಿದರು. ಯುವ ಘಟಕದ ಅಧ್ಯಕ್ಷ ಪರಶುರಾಮ ನಂದೇಶ್ವರ, ನಗರ ಘಟಕದ ಅಧ್ಯಕ್ಷ ಸುನೀಲಗೌಡ ಪಾಟೀಲ, ಮುರಗೇಶ ಕುಮಠಳ್ಳಿ ,ಬಸವರಾಜ ಠಕ್ಕಣ್ಣವರ ಹಲವರು ಇದ್ದರು.