ಬೈಲಹೊಂಗಲ (ಬೆಳಗಾವಿ ಜಿಲ್ಲೆ): ‘ಸಿದ್ದರಾಮಯ್ಯ ಅವರೇ ನಿಮ್ಮ ಆಟ ಕೊನೆಯಾಗಿದೆ. ರಾಜಕೀಯ ಚೆಲ್ಲಾಟ ಬಿಟ್ಟುಬಿಡಿ. ನರೇಂದ್ರ ಮೋದಿ ಅವರ ಟೀಕೆ ಮಾಡುವುದನ್ನು ಬಿಟ್ಟು ನಿಮ್ಮ ಪರಿಸ್ಥಿತಿ ಎನಾಗಿದೆ, ಕಾಂಗ್ರೆಸ್ ಸ್ಥಿತಿ ಏನಾಗಿದೆ ನೋಡಿಕೊಳ್ಳಿ’ ಎಂದು ಶಾಸಕ ಬಿ.ಎಸ್.
ಯಡಿಯೂರಪ್ಪ ಕಿಡಿಕಾರಿದರು.
ಪಟ್ಟಣದಲ್ಲಿ ಶನಿವಾರ ನಡೆಸಿದ ರೋಡ್ ಶೋನಲ್ಲಿ ಮಾತನಾಡಿದ ಅವರು, ‘ಎಲ್ಲ ಚುನಾವಣೆಗಳಲ್ಲೂ ಜನ ನಿಮ್ಮನ್ನು ಮೂಲೆಗುಂಪು ಮಾಡಿದ್ದಾರೆ. ಹಣ ಬಲ, ತೋಳ ಬಲ, ಜಾತಿಯ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲುವ ನಿಮ್ಮ ಕುತಂತ್ರವನ್ನು ಜನ ಕೊನೆಗಾಣಿಸಿದ್ದಾರೆ’ ಎಂದೂ ದೂರಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸುವ ಹುನ್ನಾರ ಮಾಡಿದ್ದು ಇದೇ ಸಿದ್ದರಾಮಯ್ಯ. ನಂತರ ಜಿ.ಪರಮೇಶ್ವರ ಅವರನ್ನು ರಾಜಕೀಯವಾಗಿ ಮುಗಿಸಿದರು. ಈಗ ಮುನಿಯಪ್ಪ ಅವರನ್ನು ಮುಗಿಸಲು ಹೊರಟಿದ್ದಾರೆ. ಪರಿಶಿಷ್ಟರನ್ನು, ಪರಿಶಿಷ್ಟ ನಾಯಕರನ್ನು ಮೂಲೆಗುಂಪು ಮಾಡಿದ್ದು ಸಿದ್ದರಾಮಯ್ಯ’ ಎಂದು ಆರೋಪಿಸಿದರು.
ಇದೇ ವೇಳೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಹಲವು ಸಚಿವರು, ಶಾಸಕರು, ಅಪಾರ ಸಂಖ್ಯೆಯ ಕಾರ್ಯಕರ್ತರು ಸೇರಿದ್ದರು. ಸವದತ್ತಿ ಹಾಗೂ ರಾಮದುರ್ಗ ಪಟ್ಟಣಗಳಲ್ಲೂ ಯಡಿಯೂರಪ್ಪ ರೋಡ್ ಶೋ ಮಾಡಿದರು.
ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರ ಲಂಚ ತೆಗೆದುಕೊಂಡ ಹಾಗೂ ಅವರ ಮನೆಯಲ್ಲಿ ಹಣ ಸಿಕ್ಕ ಬಗ್ಗೆ ಲೋಕಾಯುಕ್ತರು ಸೂಕ್ತ ಕ್ರಮ ಜರುಗಿಸಲಿದ್ದಾರೆ’ ಎಂದರು
Laxmi News 24×7