ಹಾರೂಗೇರಿ (ಬೆಳಗಾವಿ ಜಿಲ್ಲೆ): ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಆರು ಆರೋಪಿಗಳನ್ನು ಹಾರೂಗೇರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಅಸ್ಥಿಪಂಜರಗಳನ್ನೂ ಪತ್ತೆ ಮಾಡಿದ್ದಾರೆ.
ಖಣದಾಳ ಗ್ರಾಮದ ಬಾಳಪ್ಪ ಆಜೂರೆ ಕೊಲೆಯಾದವರು. ಇದೇ ಊರಿನ ವಾಸುದೇವ ನಾಯಕ ಹಾಗೂ ಬಾಳಪ್ಪ ಅವರ ಸಹೋದರ ಭೀಮಪ್ಪ ಆಜೂರೆ ಇದರಲ್ಲಿ ಪ್ರಮುಖ ಆರೋಪಿಗಳು.
2022ರ ಆಗಸ್ಟ್ 18ರಂದು ಬಾಳಪ್ಪ ಅವರನ್ನು ಅಪಹರಿಸಿದ ಆರೋಪಿಗಳು ಕೋಳಿ ಫಾರ್ಮ್‌ವೊಂದರಲ್ಲಿ ಕೊಲೆ ಮಾಡಿ, ಮಹಾರಾಷ್ಟ್ರದ ವಿಶಾಲಗಡ ಹೊರವಲಯದ ದಟ್ಟ ಅರಣ್ಯದಲ್ಲಿ ದೇಹ ಎಸೆದು ಬಂದಿದ್ದರು.
ಬಾಳಪ್ಪ ಅವರ ಕಾಣೆ ಅಥವಾ ಕೊಲೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೆ, ಇದಕ್ಕೂ ಮುನ್ನ ಕೊಲೆಯಾದ ಬಾಳಪ್ಪ ಅವರ ತಂದೆಯನ್ನೂ ವಾಸುದೇವ ಅಪಹರಣ ಮಾಡಿದ್ದ. ಈ ಪ್ರಕರಣದ ವಿಚಾರಣೆ ನಡೆಸುವಾಗಿ ಕೊಲೆ ಮಾಡಿದ ಸಂಗತಿ ಹೊರಬಿದ್ದಿದೆ. ಅಲ್ಲದೇ ವಿವಿಧ 20 ಅಪರಾಧ ಕೃತ್ಯಗಳಲ್ಲಿಯೂ ವಾಸುದೇವ ಬೇಕಾಗಿದ್ದಾನೆ ಎಂದು ಹಾರೂಗೇರಿ ಸಿಪಿಐ ರವಿಚಂದ್ರ ತಿಳಿಸಿದರು.
ವಿಶಾಲಗಡಕ್ಕೆ ತೆರಳಿದ ಹಾರೂಗೇರಿ ಪೊಲೀಸರ ತಂಡ ದಟ್ಟ ಅರಣ್ಯದಲ್ಲಿಯೂ ಅಸ್ಥಿಪಂಜರಗಳನ್ನು ಹುಡುಕುವಲ್ಲಿ ಯಶಸ್ವಿಯಾದರು.