Breaking News

ದಿ|ಆನಂದ ಮಾಮನಿ ಅವರ ಸ್ಥಾನ ತುಂಬುವವರು ಬಿಜೆಪಿಯವರೇ ಅಥವಾ ಕಾಂಗ್ರೆಸ್‌ನವರೇ

Spread the love

ಬೆಳಗಾವಿ: ಸತತ ಮೂರು ಬಾರಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸವದತ್ತಿ ಯಲ್ಲಮ್ಮ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿ ಶಾಸಕ ದಿ|ಆನಂದ ಮಾಮನಿ ಅವರ ಸ್ಥಾನವನ್ನು ತುಂಬುವ ವರು ಯಾರು? -ಇದು ಸವದತ್ತಿ ಕ್ಷೇತ್ರದಾದ್ಯಂತ ಈಗ ಎಲ್ಲರ ಬಾಯಲ್ಲಿ ಕೇಳಿಬರುತ್ತಿರುವ ಕುತೂಹಲದ ಪ್ರಶ್ನೆ.

ಮಾಮನಿ ಅವರ ಸ್ಥಾನ ತುಂಬುವವರು ಬಿಜೆಪಿಯವರೇ ಅಥವಾ ಕಾಂಗ್ರೆಸ್‌ನವರೇ ಎಂಬ ಚರ್ಚೆ ನಿರಂತರವಾಗಿ ನಡೆದಿದೆ.

ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ದಿಂದ ಟಿಕೆಟ್‌ ಯಾರಿಗೆ ಎಂಬುದು ಅಂತಿಮವಾಗಿಲ್ಲ. ಎರಡೂ ಪಕ್ಷದಲ್ಲಿ ಆಕಾಂಕ್ಷಿಗಳ ದಂಡೇ ಇದೆ. ಅದರಲ್ಲೂ ಕಾಂಗ್ರೆಸ್‌ನಲ್ಲಿ ಒಮ್ಮೆ ಸಿದ್ದರಾಮಯ್ಯ, ನಂತರ ಸತೀಶ್‌ ಜಾರಕಿಹೊಳಿ ಅವರ ಹೆಸರು ಕೇಳಿಬಂದಿರುವುದು ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇನ್ನೊಂದು ಕಡೆ ಮಾಮನಿ ಅವರ ಕುಟುಂಬದ ಸದಸ್ಯರಿಗೆ ಬಿಜೆಪಿಯಿಂದ ಟಿಕೆಟ್‌ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.

ಬಿಜೆಪಿಯಲ್ಲಿ ಆನಂದ ಮಾಮನಿ ಅವರ ಪತ್ನಿ ರತ್ನಾ, ಸಹೋದರ ವಿರುಪಾಕ್ಷ ಮಾಮನಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರುದ್ರಣ್ಣ ಚಂದರಗಿ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ವೃತ್ತಿಯಿಂದ ವ್ಯಾಪಾರಿಯಾಗಿರುವ ರುದ್ರಣ್ಣ ಚಂದರಗಿ ಕಳೆದ ಹಲವಾರು ವರ್ಷಗಳಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಮಾಮನಿ ಕುಟುಂಬದ ಸದಸ್ಯರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ಆನಂದ ಮಾಮನಿ ಅವರ ಮೇಲಿನ ಅನುಕಂಪ ನೆಚ್ಚಿಕೊಂಡಿದ್ದು ಇದೇ ಆಧಾರದ ಮೇಲೆ ಟಿಕೆಟ್‌ಗೆ ಪಕ್ಷದ ವರಿಷ್ಠರ ಮುಂದೆ ಮನವಿ ಮಾಡಿದ್ದಾರೆ. ಈ ಅನುಕಂಪದಿಂದ ಅವರಿಗೆ ಟಿಕೆಟ್‌ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಈಗಿನ ಮಾಹಿತಿ ಪ್ರಕಾರ ಮಾಮನಿ ಕುಟುಂಬ ಸದಸ್ಯರಿಗೇ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಿದೆ. ಆನುಕಂಪದ ಮೇಲೆ ನಮಗೆ ಅನುಕೂಲಕರ ವಾತಾವರಣ ಇದೆ ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಪಕ್ಷದ ಹಿರಿಯ ನಾಯಕರು ಆನಂದ ಮಾಮನಿ ಅವರ ಪತ್ನಿ ರತ್ನಾ ಅವರಿಗೆ ಟಿಕೆಟ್‌ ಕೊಡುವ ಬಗ್ಗೆ ಆಸಕ್ತಿ ತೋರಿಸಿದ್ದರೆ, ಸಂಘ ಪರಿವಾದವರು ವೃತ್ತಿಯಿಂದ ವರ್ತಕರಾಗಿರುವ ವಿರುಪಾಕ್ಷ ಮಾಮನಿ ಪರ ನಿಂತಿದ್ದಾರೆ. ಇಬ್ಬರೂ ರಾಜಕೀಯ ಕ್ಷೇತ್ರಕ್ಕೆ ಹೊಸಬರು.

ಕಾಂಗ್ರೆಸ್‌ನಲ್ಲಿ ನಾಲ್ವರು ಪ್ರಬಲ ಆಕಾಂಕ್ಷಿಗಳಿರುವುದು ನಾಯಕರಿಗೆ ಸ್ವಲ್ಪ ತಲೆಬಿಸಿಯಾಗಿದೆ. ಸತೀಶ್‌ಜಾರಕಿಹೊಳಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಮಾತುಗಳು ವ್ಯಾಪಕವಾಗಿ ಹರಿದಾಡಿದ್ದವು. ಇದರ ಮಧ್ಯೆ ಸಿದ್ದರಾಮಯ್ಯ ಅವರ ಹೆಸರು ತೇಲಿ ಬಂದಿತ್ತು.

ಹೀಗಾಗಿ ಕಾಂಗ್ರೆಸ್‌ ವರಿಷ್ಠರು ಯಾರಿಗೆ ಟಿಕೆಟ್‌ ಎಂದು ಖಚಿತವಾಗಿ ಹೇಳಿಲ್ಲ. ಇಲ್ಲಿಯ ಟಿಕೆಟ್‌ ಸತೀಶ್‌ ಅವರ ನಿರ್ಧಾರದ ಮೇಲೆ ನಿಂತಿದೆ. ಸತೀಶ್‌ ಜಾರಕಿಹೊಳಿ ಹೊರತಾಗಿ ಅವರ ಆಪ್ತರಾದ ಸಮಾಜ ಸೇವಕ ವಿಶ್ವಾಸ ವೈದ್ಯ, ಸೌರಭ್‌ ಚೋಪ್ರಾ, ಪಂಚನಗೌಡ ದ್ಯಾಮನಗೌಡರ, ಉಮೇಶ ಬಾಳಿ ಅವರ ಹೆಸರು ಕೇಳಿಬರುತ್ತಿದೆ.

ಜಾತ್ಯತೀತ ಜನತಾದಳ ಇದುವರೆಗೆ ಯಾರನ್ನು ನಿಲ್ಲಿಸಬೇಕು ಎಂಬುದರ ಬಗ್ಗೆ ಆಸಕ್ತಿ ತೋರಿಸಿಲ್ಲ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದವರ ಹೆಸರು ಬಹಿರಂಗವಾಗಿಲ್ಲ. ಬದಲಾಗಿ ಕಾಂಗ್ರೆಸ್‌-ಬಿಜೆಪಿ ಟಿಕೆಟ್‌ ಘೋಷಣೆ ಮೇಲೆ ಕಣ್ಣಿಟ್ಟಿದೆ.

ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ದಲ್ಲಿನ ಒಡಕು ಆನಂದ ಮಾಮನಿ ಅವರಿಗೆ ಅನುಕೂಲ ಮಾಡಿಕೊಟ್ಟಿತ್ತು. ಕಾಂಗ್ರೆಸ್‌ ವಿರುದ್ಧ ಬಂಡಾಯ ಎದ್ದಿದ್ದ ಆನಂದ ಛೋಪ್ರಾ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ವಿಶ್ವಾಸ ವೈದ್ಯ ಬಿಜೆಪಿ ಗೆಲುವಿಗೆ ಸುಲಭದ ದಾರಿ ಮಾಡಿಕೊಟ್ಟಿದ್ದರು.

ಹೀಗಾಗಿ ಈ ಬಾರಿಯೂ ಅದೇ ಕಥೆ ಮುಂದುವರಿಯುವುದೇ ಎಂಬ ಕುತೂಹಲ ಕ್ಷೇತ್ರದಲ್ಲಿದೆ. ಆದರೆ ಯಾವುದೇ ಕಾರಣಕ್ಕೂ ಬಂಡಾಯಕ್ಕೆ ಅವಕಾಶ ಮಾಡಿಕೊಡಬಾರದು. ಗೆಲುವು ನಮ್ಮದಾಗಬೇಕು ಎಂಬ ಲೆಕ್ಕಾಚಾರದೊಂದಿಗೆ ಕಾಂಗ್ರೆಸ್‌ ಬಹಳ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.


Spread the love

About Laxminews 24x7

Check Also

ಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಪ್ರಮುಖವಾಗಿ ಪಕ್ಷದ ಸಂಘಟನೆ ವಿಷಯದಲ್ಲಿ ಚರ್ಚೆ

Spread the loveಬೆಂಗಳೂರು, ಜುಲೈ 7: ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ