ಬೆಳಗಾವಿ: ಕಾಂಗ್ರೆಸ್‌ನ ಗೃಹಲಕ್ಷ್ಮೀ, ಗೃಹಜ್ಯೋತಿ ಗ್ಯಾರಂಟಿ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕರ್ತರು ಮನೆ-ಮನೆಗೂ ಒಯ್ಯುತ್ತಾರೆ. ಪ್ರತಿ ಮನೆಗೂ ತೆರಳಿ ರಿಜಿಸ್ಟ್ರೇಷನ್ ಮಾಡುತ್ತಾರೆ. ಎಲ್ಲ ಕ್ಷೇತ್ರದಲ್ಲಿಯೂ ತೆರಳಿ ಕಾರ್ಡ್ ವಿತರಿಸುತ್ತೇವೆ.
ಗೃಹಲಕ್ಷ್ಮೀ, ಗೃಹಜ್ಯೋತಿ ಕಾರ್ಯಕ್ರಮದಿಂದ ಬಿಜೆಪಿ ತಲ್ಲಣಗೊಂಡಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತ ನಾಡಿದ ಅವರು, ಬಿಜೆಪಿ 100 ಕೋಟಿ ರೂ.ಗೆ ಶಾಸಕರನ್ನು ಖರೀದಿ ಮಾಡುತ್ತದೆ. ಕಾಂಗ್ರೆಸ್ ಟಿಕೆಟ್ ಅರ್ಜಿಗಾಗಿ ಪಾರದರ್ಶಕ ರೀತಿಯಲ್ಲಿ ಎರಡು ಲಕ್ಷ ರೂ. ಪಡೆದಿದೆ. ಇದೆಲ್ಲ ಫಂಡ್ ಕಾಂಗ್ರೆಸ್ ಕಾರ್ಯಕರ್ತರದ್ದು. ಪಕ್ಷ ನಡೆಸಲು ಫಂಡ್ ಸಂಗ್ರಹಿಸಲಾಗಿದೆ ಎಂದರು.
ಬಿಜೆಪಿ ಸರ್ಕಾರದ ಯೋಜನೆ ನಕಲು ಮಾಡಿ ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆ ಘೋಷಿಸಿದೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರ್ಜೇವಾಲಾ, ನಕಲು ಮಾಡಲು ಬುದ್ಧಿಯ ಅವಶ್ಯಕತೆ ಇರುತ್ತದೆ ಎಂದು ವ್ಯಂಗ್ಯವಾಡಿದರು.
ನಕಲು ಮಾಡಲು ಬುದ್ಧಿ ಬೇಕು. ಒಂದು ಬಾರಿ ಹೇಳ್ತೀರಿ, ಈ ಯೋಜನೆ ಜಾರಿ ಸಾಧ್ಯ ಇಲ್ಲ ಅಂತ. ಮತ್ತೊಂದು ಸಲ ಇದು ಬಿಜೆಪಿಯ ನಕಲು ಅಂತ ಹೇಳುತ್ತೀರಿ. ಯಾವುದು ಸತ್ಯ ಎಂದು ಪ್ರಶ್ನಿಸಿದರು. ಡಿಕೆಶಿ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ಸೇರಿ ಎಲ್ಲರಿಂದ ಅಭಿಪ್ರಾಯ ಪಡೆದು ಮುಂದಿನ ಹದಿನೈದು ದಿನಗಳಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.