ಕಿತ್ತೂರು: : ಕಾಲೇಜು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದವರು ಹೆಚ್ಚಾಗಿ ಉತ್ತರ ಕರ್ನಾಟಕದವರೆ ಆಗಿದ್ದಾರೆ. ಇಲ್ಲಿಂದ ವಲಸೆ ಹೋಗಿ ಅಲ್ಲಿ ನೆಲೆಸಿದವರಾಗಿದ್ದಾರೆ ಎಂದು ಆರ್‌ಜಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಎಂ. ಗಣಾಚಾರಿ ತಿಳಿಸಿದರು.
ಇಲ್ಲಿನ ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಸಾಧನೆಗೆ ಏಕಾಗ್ರತೆ ಮತ್ತು ತಾಳ್ಮೆ ಬೇಕು. ಪ್ರಾಮಾಣಿಕತೆ ಇರುವವ ಸಾಧಕ ಆಗುತ್ತಾನೆ. ಪ್ರಾಮಾಣಿಕತೆ ಇಲ್ಲದ ವಿದ್ಯಾರ್ಥಿಗೆ ಹಿರಿಯರು ತಿಳಿವಳಿಕೆ ನೀಡಬೇಕು. ಪ್ರಾಮಾಣಿಕತೆ ಇರದ ಸಾಧಕರ ಕೊರತೆ ಇಂದು ಹೆಚ್ಚು ಕಂಡು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಂಎಸ್ಸಿಯಲ್ಲಿ ಸಾಧನೆ ಮಾಡಿದ ಸುಜಯ ಕಡೇಮನಿ, ಸಂಗೀತ ಕಲಾವಿದ ಈಶ್ವರ ಗಡಿಬಿಡಿ, ನಿವೃತ್ತ ಸೇನಾಧಿಕಾರಿ ಪರ್ವೀಜ್ ಹವಾಲ್ದಾರ್, ಆಶ್ಫಾಕ್ ಹವಾಲ್ದಾರ್ ಅವರನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ವಿಶ್ರಾಂತ ಪ್ರಾಚಾರ್ಯರಾದ ಎನ್.ಎಸ್. ಗಲಗಲಿ, ಡಾ.ಎಸ್.ಬಿ. ದಳವಾಯಿ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುರುಸಿದ್ದಯ್ಯ ಕಲ್ಮಠ, ಉಪಾಧ್ಯಕ್ಷೆ ಉಮಾ ಸಾಣಿಕೊಪ್ಪ, ಕಾರ್ಯದರ್ಶಿ ಸಕ್ಕರಗೌಡ ಪಾಟೀಲ, ಮುಖ್ಯ ಶಿಕ್ಷಕ ಸಿ.ಎಂ. ಪಾಗಾದ ಇದ್ದರು.