ನವದೆಹಲಿ: ದೆಹಲಿ, ಪಂಜಾಬ್‌ನಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಾರ್ಟಿಯು (ಎಎಪಿ), ಗುಜರಾತ್ ಹಾಗೂ ಗೋವಾದಲ್ಲಿಯೂ ಖಾತೆ ತೆರೆಯುವ ಮೂಲಕ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಶೇ 13ರಷ್ಟು ಮತಗಳನ್ನು ಪಡೆದ ಎಎಪಿ, 5 ಸ್ಥಾನಗಳಲ್ಲಿ ಗೆದ್ದಿದೆ.
ಗೋವಾದಲ್ಲಿ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ಕಳೆದ ವರ್ಷ ನಡೆದ ಚುನಾವಣೆಗಳಲ್ಲಿ ತನ್ನ ಸಾಧನೆಯನ್ನು ಹೆಚ್ಚಿಸಿಕೊಂಡಿದೆ. ಈಗ, 2023ರಲ್ಲಿ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮುಂದುವರಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಕುಮಾರ್ ಗುಪ್ತ ತಿಳಿಸಿದ್ದಾರೆ.
ಕರ್ನಾಟಕ, ಛತ್ತೀಸಗಡ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗಳಿಗೆ ಇದೇ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಾಧನೆಗಳ ಪಟ್ಟಿ: ದೆಹಲಿ ಹಾಗೂ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಪಕ್ಷ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳು ಹಾಗೂ ಭ್ರಷ್ಟಾಚಾರ ವಿರುದ್ಧ ಕೈಗೊಂಡ ಕಠಿಣ ಕ್ರಮಗಳನ್ನು ವಿವರಿಸಿದ್ದಾರೆ.
ಭ್ರಷ್ಟಾಚಾರ ವಿರುದ್ಧದ ಹೋರಾಟದ ಭಾಗವಾಗಿ ಈವರೆಗೆ 172 ಜನರನ್ನು ಬಂಧಿಸಲಾಗಿದ್ದು, 371 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ 119 ಉಗ್ರರನ್ನು ಬಂಧಿಸಲಾಗಿದೆ. 385 ಶಸ್ತ್ರಾಸ್ತ್ರಗಳು ಹಾಗೂ 22 ಡ್ರೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಪ್ತ ವಿವರಿಸಿದ್ದಾರೆ.
ಸರ್ಕಾರ ಜಮೀನು ಒತ್ತುವರಿ ವಿರುದ್ಧವೂ ಪಂಜಾಬ್ ಸರ್ಕಾರ ಕ್ರಮ ಕೈಗೊಂಡಿದೆ. ₹ 2,700 ಕೋಟಿಗೂ ಅಧಿಕ ಮೌಲ್ಯದ 9,300 ಎಕರೆಯಷ್ಟು ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. 100 ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯಲಾಗಿದ್ದು, 5 ಲಕ್ಷಕ್ಕೂ ಅಧಿಕ ಜನರಿಗೆ ಆರೋಗ್ಯ ಸೇವೆಗಳನ್ನು ನೀಡಲಾಗಿದೆ. 21 ಸಾವಿರ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಒಟ್ಟು ಗ್ರಾಹಕರ ಪೈಕಿ ಶೇ 86ರಷ್ಟು ಜನರಿಗೆ ಉಚಿತ ವಿದ್ಯುತ್ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.