ಹೊಸದಿಲ್ಲಿ: ಕೇಂದ್ರ ಸರಕಾರ ದೇಶದಲ್ಲಿರುವ ತನ್ನ ಒಂದು ಕೋಟಿಗೂ ಅಧಿಕ ಸಿಬ್ಬಂದಿ ಹಾಗೂ ಪಿಂಚಣಿದಾರರರ 18 ತಿಂಗಳ ಹಳೆಯ ತುಟ್ಟಿಭತ್ಯೆ ಬಾಕಿ, ಅದರ ಫಿಟ್ಮೆಂಟ್ ಅಂಶಗಳು ಹಾಗೂ ಹೆಚ್ಚುವರಿ ತುಟ್ಟಿಭತ್ಯೆ ಪಾವತಿಯ ಔಪಚಾರಿಕ ದೃಢೀಕರಣಕ್ಕೆ ಮುಂದಾಗಿದೆ.
ಕೇಂದ್ರ ಸರಕಾರದ ನೌಕರರು ಹಾಗೂ ಸಿಬ್ಬಂದಿ ಶೀಘ್ರವೇ ಈ ಕುರಿತ ಸಿಹಿ ಸುದ್ದಿ ಪಡೆಯಲಿದ್ದಾರೆ. ಈ ವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ಸರಕಾರದಿಂದ ಘೋಷಣೆ ನಿರೀಕ್ಷಿಸಲಾಗಿದೆ.
2020ರ ಜುಲೈ ತಿಂಗಳಿನಿಂದ ಜನವರಿವರೆಗಿನ ಕೇಂದ್ರ ಸರಕಾರಿ ನೌಕರರ ಹಾಗೂ ಪಿಂಚಣಿದಾರರ ತುಟ್ಟಿಭತ್ಯೆ ಬಾಕಿ ಇದೆ. ಎರಡು ವರ್ಷಗಳ ಹಿಂದೆ ಕೋವಿಡ್ ಅವಧಿಯಲ್ಲಿ ಕೇಂದ್ರ ಸರಕಾರ 48 ಲಕ್ಷ ಕೇಂದ್ರ ನೌಕರರು ಮತ್ತು 64 ಲಕ್ಷ ಪಿಂಚಣಿದಾರರಿಗೆ ಬಹಳ ಸಮಯದಿಂದ ತುಟ್ಟಿ ಭತ್ಯೆಯನ್ನು ತಡೆಹಿಡಿದಿತ್ತು.
ಜುಲೈ 1 ರಿಂದ ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯ ಹೆಚ್ಚುವರಿ ಶೇ.4 ರ ಕಂತು ಬಿಡುಗಡೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 2022ರ ಜೂನ್ ನಲ್ಲಿ ಮುಕ್ತಾಯಗೊಳ್ಳುವ ಅವಧಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ 12 ಮಾಸಿಕ ಸರಾಸರಿಯಲ್ಲಿ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ ಇದನ್ನು ನಿರ್ಣಯಿಸಲ್ಪಲಾಗುತ್ತಿದೆ.
ಹೆಚ್ಚುತ್ತಿರುವ ಹಣದುಬ್ಬರ ದರಗಳಿಂದಾಗಿ, ಸರಕಾರಿ ನೌಕರರು ತಮ್ಮ ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳವನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಸಾಮಾನ್ಯ ಫಿಟ್‌ಮೆಂಟ್ ಅಂಶದ ಪ್ರಸ್ತುತ ಮೌಲ್ಯ ಶೇ.2.57 ಆಗಿದೆ. ಅಂದರೆ ಒಬ್ಬ ವ್ಯಕ್ತಿಯು 4200 ಗ್ರೇಡ್ ವೇತನದಲ್ಲಿ 15,500 ರೂ.ನ ವೇತನ ಪಡೆದರೆ, ಅಂಥ ನೌಕರನ ಒಟ್ಟು ವೇತನ 15,500 x 2.57 ರೂ. ಅಥವಾ 39,835ರೂ. ಆಗಿರುತ್ತದೆ.