ಮೈಸೂರು: ‘ಬಡತನದ ರೇಖೆ ಕೆಳಗೆ ಜಾರುತ್ತಿರುವ ಲಕ್ಷಾಂತರ ಜನರನ್ನು ಸಂರಕ್ಷಣೆ ಮಾಡುತ್ತಿಲ್ಲ. ಜಾಹೀರಾತಿನ ಮೂಲಕವೇ ರಾಜ್ಯ ಬಿಜೆಪಿ ಸರ್ಕಾರ ಉಸಿರಾಡುತ್ತಿದೆ’ ಎಂದು ಎಐಸಿಸಿ ಚುನಾವಣಾ ಸಮಿತಿ ಸದಸ್ಯ ಎಂ.ವೀರಪ್ಪ ಮೊಯಿಲಿ ಟೀಕಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಬುಧವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ‘ಬಡವರ ಸಂರಕ್ಷಣೆ ಮಾಡಬೇಕಾದ್ದು, ಸರ್ಕಾರದ ಬದ್ಧತೆ.
ಆದರೆ, ಬಿಜೆಪಿ ಅವಧಿಯಲ್ಲಿ ಶ್ರೀಮಂತರು ಮತ್ತೂ ಶ್ರೀಮಂತರಾಗುತ್ತಿದ್ದಾರೆ. ಹೀಗಾಗಿಯೇ ಶೇ 95ರಷ್ಟು ಚುನಾವಣಾ ಬಾಂಡ್‌ಗಳು ಬಿಜೆಪಿ ಪಾಲಾಗಿವೆ’ ಎಂದು ವ್ಯಂಗ್ಯವಾಡಿದರು.
‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಗಗನಕ್ಕೇರಿದಿದೆ. ದುಡಿಯುವ ವರ್ಗಕ್ಕೆ ಸಂಬಳ ಸಾಲುತ್ತಿಲ್ಲ. ಮನೆ ನಿರ್ವಹಿಸಲು ಆಗುತ್ತಿಲ್ಲ. ಉದ್ಯೋಗ ಸಿಗುತ್ತಿಲ್ಲ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಂದ ಸುಲಿಗೆ ಮಾಡುತ್ತಿವೆ. ಆರ್ಥಿಕ ಅರಾಜಕತೆ ಸೃಷ್ಟಿಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ನರೇಗಾ, ಆಹಾರ ಭದ್ರತೆ, ಮಾಹಿತಿ ಹಕ್ಕು ಕಾಯ್ದೆ, ಲೋಕಪಾಲ್ ಜಾರಿಗೊಳಿಸಿದ್ದು ಯುಪಿಎ ಸರ್ಕಾರ. ಎಲ್ಲ ಯೋಜನೆಗಳನ್ನು ಬಿಜೆಪಿ ನಿಷ್ಕ್ರಿಯ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಜೈಲಿಗೆ ಹೋಗುವ ಮೂಲಕ ರಾಜ್ಯಕ್ಕೆ ಕಪ್ಪುಚುಕ್ಕೆ ತಂದರು. ಬೊಮ್ಮಾಯಿ ಅದಕ್ಷ ಮುಖ್ಯಮಂತ್ರಿ. ಯಾವುದೇ ಕೆಲಸವನ್ನೂ ಮಾಡದೇ ಬಿಜೆಪಿಯು ರಾಜ್ಯಕ್ಕೆ ಹೊರೆಯಾಗಿದೆ. ಬಹುಮತದೊಂದಿಗೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಜನರು ನಿರ್ಧಿಸಿದ್ದಾರೆ’ ಎಂದರು.
‘ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಚುರುಕಾಗಿ ಪ‍್ರಚಾರ ನಡೆಸಿವೆ. ಸ್ಪರ್ಧಾತ್ಮಕ ಪೈಪೋಟಿ ನಡೆಯಲಿದೆ’ ಎಂದು ವಿಶ್ಲೇಷಿಸಿದರು.
‘ಮಾಧ್ಯಮಗಳ ಮೇಲೆ ಭಯ, ಆತಂಕ ಹುಟ್ಟಿಸುವುದಕ್ಕಾಗಿಯೇ ಬಿಬಿಸಿಯ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಪರಿಶೀಲನೆ ನಡೆಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮೇಲೆ ಪರಿಣಾಮ ಬೀರಲಿದೆ. ಮಾಧ್ಯಮ ಸ್ವಾತಂತ್ರ್ಯದ ಮೇಲೆ ರಾಜಕೀಯ ಹಸ್ತಕ್ಷೇಪ ಸಲ್ಲದು’ ಎಂದರು.
‘ಕೊಲಿಜಿಯಂ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಕೇಂದ್ರ ಕಾನೂನು ಸಚಿವರು ಪ್ರಶ್ನೆ ಮಾಡುತ್ತಿರುವುದು ಸರಿಯಲ್ಲ. ನ್ಯಾಯಾಂಗದ ಮೇಲೆ ಅವಿಶ್ವಾಸ ಮೂಡಿಸುವ ಕೆಲಸ ಮಾಡಬಾರದು. ಅದು ಕಾನೂನು ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ’ ಎಂದರು.
‘ವ್ಯವಸ್ಥಿತ ಕೊಲಿಜಿಯಂಗೆ ಕಾನೂನು ತಂದಿದ್ದೆವು. ಅದಕ್ಕೆ ಎನ್‌ಡಿಎ ಸರ್ಕಾರದ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅದನ್ನು ಪ್ರಶ್ನೆ ಮಾಡುವುದು ಆತಂಕಕಾರಿಯಾಗಿದೆ’ ಎಂದು ಹೇಳಿದ ಅವರು, ‘ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದು ಅಸಾಧ್ಯ. ಹಿಂದೂಗಳೊಳಗೆ ಹಲವು ಕಾನೂನುಗಳಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.